ಸಂಪುಟ ಕ್ಯಾತೆ: ಜಾರಕಿಹೊಳಿ, ಆನಂದ್ ಸಿಂಗ್, ಯೋಗೇಶ್ವರ್ ನಡೆ ನಿಗೂಢ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ರಚನೆಯಾಗಿ, ಖಾತೆಗಳು ಹಂಚಿಕೆಯಾದ ನಂತರ ಬಿಜೆಪಿಯಲ್ಲಿ ಅಸಮಾಧಾನ, ಅತೃಪ್ತಿ ಹೊಗೆಯಾಡುತ್ತಿದೆ. ಒಂದೆಡೆ ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ರೆ, ಇನ್ನೊಂದೆಡೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಬಿಜೆಪಿ ಶಾಸಕರು ಹೈಕಮಾಂಡ್ ಭೇಟಿಗೆ ಹೋಗುತ್ತಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸಿ.ಪಿ. ಯೋಗೀಶ್ವರ್, ಆರ್. ಶಂಕರ್, ಶ್ರೀಮಂತ ಪಾಟೀಲ್ ರವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇವರಿಗೆ ಸಾಥ್ ನೀಡಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೆರಳಿರುವುದು ಕುತೂಹಲ ಕೆರಳಿಸಿದೆ. ಸರ್ಕಾರ ರಚನೆಗೆ ಕಾರಣರಾದ ತಮ್ಮನ್ನು ಸಂಪುಟದಿಂದ ಕೈಬಿಟ್ಟಿದ್ದರಿಂದ ಅಸಮಾಧಾನಗೊಂಡಿರುವ ಇವರುಗಳು, ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಕೋರಲಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ನೀಡಿಲ್ಲ. ಜೊತೆಗೆ ತಮಗೆ ಆಪ್ತರಾದ ಶ್ರೀಮಂತ ಪಾಟೀಲ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದರಿಂದ ಆಕ್ರೋಶಗೊಂಡಿರುವ ರಮೇಶ್‌ಜಾರಕಿಹೊಳಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಖಾಲಿ ಇರುವ 4 ಸಚಿವ ಸ್ಥಾನಗಳನ್ನು ತಮ್ಮ ಆಪ್ತರಿಗೆ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿರುವ ರಮೇಶ್ ಜಾರಕಿಹೊಳಿಯವರು ತಮ್ಮ ಸಹೋದರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಯವರನ್ನು ಯಾವ ಕಾರಣಕ್ಕೆ ಸಂಪುಟಕ್ಕೆ ಸೇರ್ಪಡೆಗೊಳಿಸಲಿಲ್ಲ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಸಿಡಿ ಕೇಸ್ ಸಂಬಂಧ ಕ್ಲೀನ್ ಚಿಟ್ ದೊರೆಯುವವರೆಗೂ ಬಾಲಚಂದ್ರ ಅವರನ್ನು ಬೊಮ್ಮಾಯಿ ಸಂಪುಟದಲ್ಲಿ ಇರಿಸಿಕೊಳ್ಳಬೇಕೆಂದು ರಮೇಶ್ ಜಾರಕಿಹೊಳಿಯವರು ಆಗ್ರಹಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಈ ಬಾರಿಯ ಸಂಪುಟ ರಚನೆ ವೇಳೆ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿರುವುದು ರಮೇಶ್ ಜಾರಕಿಹೊಳಿಯ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.