ಉಡುಪಿ: ನಕಲಿ ದಾಖಲೆ ನೀಡಿ ಐವರಿಂದ ಸೊಸೈಟಿಗೆ ಲಕ್ಷಾಂತರ ರೂ. ವಂಚನೆ
ಉಡುಪಿ ಆ.10 (ಉಡುಪಿ ಟೈಮ್ಸ್ ವರದಿ): ನಕಲಿ ದಾಖಲೆ ಸೃಷ್ಟಿಸಿ ತಂಡವೊಂದು ಉಡುಪಿಯ ಕೋ-ಅಪರೇಟಿವ್ ಸೊಸೈಟಿವೊಂದಕ್ಕೆ ಲಕ್ಷಾಂತರ ರೂ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಶ್ರೀರಾಮ ಉಪಾಧ್ಯ ಅವರು ಮಹಮ್ಮದ್ ಆಸೀಪ್, ನೂರುದ್ದೀನ್, ಮಹಮ್ಮದ್ ಅಶ್ರಫ್, ಅನೂಪ್, ಅಬ್ದುಲ್ ಸಮೀರ್, ಅಬ್ದುಲ್ ಹಮೀದ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ, ಶ್ರೀರಾಮ ಉಪಾಧ್ಯ ಇವರು ಉಡುಪಿ ಜಿಲ್ಲೆಯ ಶಿರಿಬೀಡುವಿನಲ್ಲಿ ಸೃಷ್ಟಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ. ಇವರಿಗೆ ಮಹಮ್ಮದ್ ಆಸೀಪ್, ನೂರುದ್ದೀನ್, ಮಹಮ್ಮದ್ ಅಶ್ರಫ್, ಅನೂಪ್, ಅಬ್ದುಲ್ ಸಮೀರ್, ಅಬ್ದುಲ್ ಹಮೀದ್ ಎಂಬ ಐವರು ಆರೋಪಿಗಳು ಸೇರಿಕೊಂಡು ನಕಲಿ ವಿಳಾಸದ ದಾಖಲೆ, ಬ್ಯಾಂಕ್ ಅಕೌಂಟ್ ಸ್ಟೇಟ್‍ಮೆಂಟ್, ಐಡಿ ಪ್ರೂಪ್‍ಗಳನ್ನು ಸೃಷ್ಟಿಸಿ ಸೃಷ್ಟಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗೆ ವಂಚಿಸಿದ್ದಾರೆ.
ಜು.16 ರಂದು ನಕಲಿ ದಾಖಲೆಗಳನ್ನು ಸೊಸೈಟಿಗೆ ನೀಡಿದ ಈ ಆರೋಪಿಗಳು ಜು.23 ರಂದು 2,34,910ರೂ, ಜು.30 ರಂದು 2,20,890 ರೂ, ಹಾಗೂ ಜು.31 ರಂದು 2,30,744 ರೂ. ಸೇರಿ ಒಟ್ಟು 6,86,557 ರೂ ಮೊತ್ತವನ್ನು ನಕಲಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಬಳಿಕ ಆ.9 ರಂದು ಆರೋಪಿಗಳ ಪೈಕಿ ಮಹಮ್ಮದ್ ಆಸೀಪ್ ಸೊಸೈಟಿಗೆ ಚೆಕ್ ತೆಗೆದುಕೊಂಡು ಹೋಗಲು ಬಂದಿದ್ದು, ನಂತರ ಕಾರಿನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಂಚನೆಗೆ ಒಳಗಾದ ಶ್ರೀರಾಮ ಉಪಾಧ್ಯ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.