ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್’ ಖಾನ್’ಗೆ ಬೆಳ್ಳಂಬೆಳಗ್ಗೆ ಇಡಿ ಶಾಕ್!
ಬೆಂಗಳೂರು: ಜಮೀರ್ ಅವರ ಚಾಮರಾಜಪೇಟೆ ಮನೆ, ಬಂಗಲೆ, ನ್ಯಾಷನಲ್ ಟ್ರಾವೆಲ್ಸ್ ಸೇರಿದಂತೆ ಐದಾರು ಕಡೆಗಳಲ್ಲಿ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದರು ಎನ್ನಲಾಗಿತ್ತು. ಆದರೆ ಅಧಿಕಾರಿಗಳು ಈಗ ನೀಡಿರುವ ಮಾಹಿತಿ ಪ್ರಕಾರ ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ನಡೆದಿರುವುದು ಐಟಿ ದಾಳಿ ಅಲ್ಲ; ಅದು ಇ.ಡಿ. ದಾಳಿ. ಅದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಿಂದ ಬಂದಿರುವ 45 ಇ.ಡಿ. ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ. ಜಮೀರ್ ಅಹ್ಮದ್ ನಿವಾಸ, ಕಚೇರಿ, ಫ್ಲ್ಯಾಟ್‌ನಲ್ಲಿ ಇ.ಡಿ. ಅಧಿಕಾರಿಗಳು ತಂಡೋಪಾದಿಯಲ್ಲಿ ದಾಖಲೆಗಳ ಪರಿಶೀಲನೆ, ಶೋಧ ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ರೇಡ್ ಮಾಡಲಾಗಿದೆ
ಜಮೀರ್ ಗೆ ಕಂಟಕವಾಯಿತೇ ಮಗಳ ಅದ್ಧೂರಿ ಮದುವೆ?
ಇನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ಹಿಂದೆ ಐಎಂಎ ಪ್ರಕರಣದ ನಂಟು ಕೇಳಿಬರುತ್ತಿದೆ. ಈ ಹಿಂದೆ ಐಎಂಎ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನ ವಂಚಕ ಮನ್ಸೂರ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ರೋಷನ್ ಬೇಗ್ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳು ಮೇಲೆ ಇಡಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಅಂತೆಯೇ ಶಾಸಕ ಜಮೀರ್ ಅಹಮದ್ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಮನ್ಸೂರ್ ಇಡಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಕೂಡ ತಮ್ಮ ಮಗಳ ಮದುವೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದ್ದರು. ಇದೇ ವಿಚಾರವಾಗಿ ಶಾಸಕ ಜಮೀರ್ ಮನೆ ಮೇಲೆ ಈಗ ಇ.ಡಿ ದಾಳಿ ನಡೆದಿದೆ ಎನ್ನಲಾಗಿದೆ.