ಪಶ್ಚಿಮ ಬಂಗಾಳ:ಅಂಪನ್ ಚಂಡಮಾರುತಕ್ಕೆ 72 ಮಂದಿ ಬಲಿ
ಕೋಲ್ಕತ್ತಾ: ಪಶ್ಚಿಮ ಬಂಗಾಳವನ್ನು ಅಪ್ಪಳಿಸಿರುವ ಅಂಪನ್ ಚಂಡಮಾರುತವು ರಾಜ್ಯದಲ್ಲಿ ಈ ವರೆಗೆ 72 ಮಂದಿಯನ್ನು ಬಲಿ ಪಡೆದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮರ ಉರುಳಿ ಬಿದ್ದು, ವಿದ್ಯುತ್ ಅವಘಡದಿಂದಲೇ ಬಹುತೇಕ ಸಾವುಗಳು ಸಂಭವಿಸಿವೆ. ಮೃತರ ಕುಟುಂಬಗಳಿಗೆ ತಲಾ ₹2.5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಅತೀ ಭೀಕರ ಚಂಡಮಾರುತಗಳಲ್ಲಿ ಒಂದೆನಿಸಿರುವ ಅಂಪನ್ ಹೊಡೆತಕ್ಕೆ ಪಶ್ಚಿಮ ಬಂಗಾಳ ಜರ್ಜರಿತಗೊಂಡಿದೆ. ಗಂಟೆಗೆ 190 ಕಿ.ಮೀ ವೇಗದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿರುವ ಅಂಪನ್ ಈ ವರೆಗೆ ಅಲ್ಲಿ ಭಾರಿ ಪ್ರಮಾಣದ ದಾಂಧಲೆ ಸೃಷ್ಟಿ ಮಾಡಿದೆ. ಪರಿಣಾಮವಾಗಿ 72 ಮಂದಿ ಮೃತಪಟ್ಟಿದ್ದಾರೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರವು ನಾಲ್ಕು ಹೆಚ್ಚುವರಿ ತಂಡಗಳನ್ನು ಏರ್ ಲಿಫ್ಟ್ ಮೂಲಕ ಸಾಗಿಸಿದೆ.
ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹಾತಿಯಾ ದ್ವೀಪದ ನಡುವಣ ಭಾಗದಲ್ಲಿ ‘ಅಂಪನ್’ ಭೂ ಪ್ರದೇಶವನ್ನು ಪ‍್ರವೇಶಿಸಿದೆ. ಕರಾವಳಿ ಪ್ರದೇಶದಲ್ಲಿ ಹಲವು ಕಟ್ಟಡಗಳು, ಮರಗಳು ಮತ್ತು ವಿದ್ಯುತ್ ಕಂಬಗಳನ್ನು ನೆಲಕ್ಕೆ ಉರುಳಿಸಿದೆ.
ಚಂಡಮಾರುತ ಪ್ರವೇಶಿಸುವುದಕ್ಕೂ ಮೊದಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ತೀರದ 6.58 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.