ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲಿ ಯಾರೂ ಹಸಿವಿನಿಂದ ಬಳಲಿಲ್ಲ: ಪ್ರಧಾನಿ ಮೋದಿ
ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶದ ಯಾವೊಬ್ಬ ಪ್ರಜೆಯೂ ಹಸಿವಿನಿಂದ ಬಳಲಿಲ್ಲ ಎಂದು ಪ್ರತಿಪಾದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉದ್ದೇಶಿತ 50 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿಯನ್ನು ತಲುಪುವತ್ತ ಭಾರತ ಮುಂದಡಿ ಇಡುತ್ತಿದೆ, ಬಡವರ ಸಶಕ್ತೀಕರಣ ಸರ್ಕಾರದ ಪ್ರಮುಖ ಆದ್ಯತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಇಡೀ ವಿಶ್ವವೇ ನಮ್ಮ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ಬಗ್ಗೆ ಚಿತ್ತ ಹರಿಸುತ್ತಿದೆ ಎಂದ ಪ್ರಧಾನಿ ಮೋದಿ 80 ಕೋಟಿ ಮಂದಿ ಎರಡು ಉಚಿತ ರೇಷನ್ ಪಡೆಯುತ್ತಿದ್ದಾರೆ, ಉಚಿತ ಧಾನ್ಯವನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜೊತೆಗೆ ನೀಡುತ್ತಿದೆ. ಈ ಯೋಜನೆ ಜಾರಿಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದರು.
ನಿನ್ನೆ ಪ್ರಧಾನ ಮಂತ್ರಿ ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಗರೀಬ್ ಕಲ್ಯಾಣ ಯೋಜನೆಯ ಗುಜರಾತ್ ರಾಜ್ಯದ ವಿವಿಧ ಭಾಗದ ಫಲಾನುಭವಿಗಳ ಜೊತೆ ಮಾತನಾಡಿದರು. ಸ್ವಾತಂತ್ರ್ಯದ ನಂತರ, ಪ್ರತಿಯೊಂದು ಸರ್ಕಾರವೂ ಬಡವರಿಗೆ ಅಗ್ಗದ ಆಹಾರವನ್ನು ಒದಗಿಸುವ ಬಗ್ಗೆ ಮಾತನಾಡಿದೆ. ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಇದರ ಪರಿಣಾಮವು ಸೀಮಿತ ವರ್ಗಕ್ಕೆ ಮಾತ್ರ ತಲುಪಿದೆ. ದೇಶದ ಆಹಾರ ದಾಸ್ತಾನು ಹೆಚ್ಚುತ್ತಲೇ ಇತ್ತು, ಆದರೆ ಹಸಿವು ಮತ್ತು ಅಪೌಷ್ಟಿಕತೆಯು ಆ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. ಇದಕ್ಕೆ ಒಂದು ಕಾರಣವೆಂದರೆ ಪರಿಣಾಮಕಾರಿ ವಿತರಣಾ ವ್ಯವಸ್ಥೆಯ ಕೊರತೆ, ಈ ಪರಿಸ್ಥಿತಿಯನ್ನು ಬದಲಾಯಿಸಲು, 2014 ರ ನಂತರ ಹೊಸದಾಗಿ ಕೆಲಸ ಆರಂಭಿಸಲಾಯಿತು ಎಂದರು.
ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್ಗಳಿಗೆ ಲಿಂಕ್ ಮಾಡಲಾಗಿರುವುದರಿಂದ ತಂತ್ರಜ್ಞಾನದ ಬಳಕೆಯು ನಕಲಿ ಫಲಾನುಭವಿಗಳನ್ನು ಹೊರಹಾಕಲು ಸಹಾಯ ಮಾಡಿತು, ಗುಜರಾತ್ ಸರ್ಕಾರವು ವಲಸೆ ಕಾರ್ಮಿಕರನ್ನು ನೋಡಿಕೊಳ್ಳುತ್ತಿರುವ ಕ್ರಮಕ್ಕೆ ಪ್ರಧಾನಿ ಶ್ಲಾಘಿಸಿದರು, “ಒಂದು ದೇಶ ಒಂದು ಪಡಿತರ ಚೀಟಿ ಉಪಕ್ರಮ” ದ ಉದ್ದೇಶವನ್ನು ರಾಜ್ಯ ಸರ್ಕಾರ ಪೂರೈಸಿದೆ ಎಂದರು