| ನವದೆಹಲಿ ಆ.3: ದೇಶದಲ್ಲಿ 2024ಕ್ಕೆ ಪ್ರಧಾನಿ ಮಹಿಳೆಯಾಗಬೇಕೆಂದು ನಟಿ, ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧಿಸುತ್ತಿದ್ದಾರೆ. ಒಲಿಂಪಿಕ್ಸ್ ನಲ್ಲಿಯೂ ದೇಶಕ್ಕೆ ಎರಡು ಪದಕ ತಂದುಕೊಟ್ಟಿದ್ದಾರೆ. ಅದೇ ರೀತಿ ಮಹಿಳೆ 2024ರಲ್ಲಿ ಭಾರತದ ಪ್ರಧಾನಿ ಆಗಬೇಕೆಂದು ಹೇಳಿದ್ದಾರೆ. ಇದೀಗ ಇವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿವಿಧ ಚರ್ಚೆಗಳು ಆರಂಭಗೊಂಡಿವೆ. ಈ ನಡುವೆ ಜಯಾ ಬಚ್ಚನ್ ಅವರು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿಯೇ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿಯೂ ಟಿಎಂಸಿ ಅಭ್ಯರ್ಥಿ ಜಯಾ ಬಚ್ಚನ್ ಪ್ರಚಾರ ನಡೆಸಿದ್ದರು. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಆಡಳಿತರೂಢ ಸರ್ಕಾರದ ವಿರುದ್ಧ ಪರೋಕ್ಷವಾಗಿ ಹೇಳಿಕೆ ನೀಡುತ್ತಿದ್ದಾರೆ.
ಇತ್ತ ಸಿಎಂ ಮಮತಾ ಬ್ಯಾನರ್ಜಿ ಸಹ ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಚುನಾವಣೆಯಲ್ಲಿ ದೀದಿ ಪರ ಕೆಲಸ ಮಾಡಿದ್ದ ರಾಜನೀತಿ ಚತುರ ಪ್ರಶಾಂತ್ ಕಿಶೋರ್ ಸಹ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
| |