ಒಲಂಪಿಕ್ಸ್: ಸೆಮಿಫೈನಲ್ ಗೆ ಭಾರತ ವನಿತೆಯ ಹಾಕಿ ತಂಡ ಅಭಿನಂದನೆಗಳ ಮಹಾಪೂರ
ನವದೆಹಲಿ: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರಬಲ ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮಣಿಸಿ ಸೆಮಿಫೈನಲ್ ಗೇರಿರುವ ಭಾರತ ವನಿತೆಯರ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಹಲವಾರು ಗಣ್ಯರು ತಂಡಕ್ಕೆ ಶುಭ ಕೋರಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಕ್ರೀಡಾಕೂಟದಲ್ಲಿ ಭಾರತ ವನಿತೆಯರ ಹಾಕಿ ತಂಡ ಐತಿಹಾಸಿಕ ಸಾಧನೆಗೈದಿದ್ದು, 130 ಕೋಟಿ ಜನರ ಕನಸನ್ನು ಸಾಕಾರಗೊಳಿಸುವತ್ತ ದಾಪುಗಾಲಿರಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ವನಿತೆಯರ ತಂಡದ ಐಸಿಹಾಸಿಕ ಸಾಧನೆಯನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನಿಜಕ್ಕೂ ಕನಸು ಸಾಕಾರಗೊಂಡ ಕ್ಷಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಬೇರಿ ಒ ಫಾರೆಲ್ಲ್ ಅವರೂ ಕೂಡ ಭಾರತ ತಂಡದ ಜಯಕ್ಕೆ ಶುಭ ಕೋರಿದ್ದು, ನಿಜಕ್ಕೂ ಇದೊಂದು ಕಠಿಣ ಪಂದ್ಯವಾಗಿತ್ತು. ಅಂತಿಮ ಕ್ಷಣದ ವರೆಗೂ ನಿಮ್ಮ ರಕ್ಷಣಾಕೋಟೆ (ಗ್ರೇಟ್ ವಾಲ್ ಆಫ್ ಇಂಡಿಯಾ)ಯನ್ನು ತಮ್ಮ ತಂಡ ಭೇದಿಸಲು ಸಾಧ್ಯವಾಗಲಿಲ್ಲ. ಶುಭವಾಗಲಿ ಎಂದು ಹಾರೈಸಿದ್ದಾರೆ.