ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳ- 2 ದಿನ ಸಂಪೂರ್ಣ ಲಾಕ್ ಡೌನ್!

ಕೊಚ್ಚಿನ್: ಕೇರಳದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಅಬ್ಬರ ಮುಂದುವರೆದಿದ್ದು, ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾದ ಹಿನ್ನಲೆಯಲ್ಲಿ 2 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ..

ಬುಧವಾರವೂ ಕೂಡ ಕೇರಳದಲ್ಲಿ 20 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದೇ ಕಾರಣಕ್ಕೆ ಸೋಂಕು ಪ್ರಮಾಣ ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ.

ಸರ್ಕಾರದ ಆದೇಶದಂತೆ ಜುಲೈ 31 ಮತ್ತು ಆಗಸ್ಟ್ 1ರಂದು ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರಲಿದೆ. ಬುಧವಾರ 22,056 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 43,654 ಪ್ರಕರಣಗಳು ಕಳೆದ ಒಂದು ದಿನದಲ್ಲಿ ಪತ್ತೆಯಾಗಿವೆ. ಅಂದರೆ ದೇಶದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಕೇವಲ ಕೇರಳ ರಾಜ್ಯ ಒಂದರಿಂದಲೇ  ವರದಿಯಾಗುತ್ತಿದೆ. 

ರಾಜ್ಯದಲ್ಲಿ ಒಟ್ಟು 33,27,301 ಪ್ರಕರಣಗಳಿವೆ, ಇದುವರೆಗೂ 16,457 ಮಂದಿ ಮೃತಪಟ್ಟಿದ್ದಾರೆ, ಕಳೆದ 24 ಗಂಟೆಗಳಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ. ಕೇರಳ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ. ಅನಿಶ್ ಮಾತನಾಡಿ ಕೇರಳಕ್ಕೆ ಸಾಕಷ್ಟು ಕೊರೊನಾ ಲಸಿಕೆಯ ಅಗತ್ಯವಿದ್ದು, ಶೀಘ್ರವೇ ಲಸಿಕೆಯನ್ನು ಒದಗಿಸುವಂತೆ  ಮನವಿ ಮಾಡಿದ್ದಾರೆ. ಇನ್ನು ಕೇರಳದ ಕೋವಿಡ್ ಪರಿಸ್ಥಿತಿ ಅರಿಯಲು ಕೇಂದ್ರ ತಜ್ಞರ ತಂಡ ಭೇಟಿ ನೀಡುತ್ತಿದ್ದು, ನಾಲ್ಕು ಮಂದಿಯ ತಜ್ಞರ ತಂಡ ಶೀಘ್ರವೇ ಕೇರಳಕ್ಕೆ ಆಗಮಿಸಲಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯ ಆರೋಗ್ಯ ಸಚಿವಾಲಯಕ್ಕೆ ಸಲಹೆ ನೀಡಲಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತ  ಹೆಚ್ಚಿರುವ ಸುಮಾರು 12 ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!