ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿರುವ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಮೊದಲ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಿಎಂ ಬೊಮ್ಮಾಯಿ, ರೈತರ ಮಕ್ಕಳಿಗೆ ಅವರ ಉನ್ನತ ಶಿಕ್ಷಣ ಪ್ರೋತ್ಸಾಹ ನೀಡಲು ಮತ್ತು ವಿದ್ಯೆಯಿಂದ ವಂಚಿತರಾಗಬಾರದೆಂಬ ಉದ್ದೇಶಕ್ಕೆ ಹೊಸ ಶಿಷ್ಯ ವೇತನ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಸರ್ಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿದೆ.
ಈಗಾಗಲೇ ಜಾರಿಯಲ್ಲಿರುವ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿಯನ್ನು ತಿಂಗಳಿಗೆ 1200 ರೂಪಾಯಿಗಳಿಗೆ ಏರಿಕೆ ಮಾಡುತ್ತಿದ್ದು ಇದರಿಂದ 35 ಲಕ್ಷ ಫಲಾನುಭವಿಗಳಿಗೆ ಲಾಭ ಉಂಟಾಗಲಿದೆ. ಸರ್ಕಾರಕ್ಕೆ 863 ಕೋಟಿ ರೂಪಾಯಿ ಹೆಚ್ಚು ಖರ್ಚಾಗಲಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ವಿಧವಾ ವೇತನವನ್ನೂ ಬೊಮ್ಮಾಯಿ ನೇತೃತ್ವದ ಸರ್ಕಾರ 600 ರಿಂದ 800 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಹಾಗೂ 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಶೇ.40-70 ಅಂಗವೈಕಲ್ಯವಿರುವವರಿಗೆ ಮಾಸಿಕವಾಗಿ ಈಗ ನೀಡಲಾಗುತ್ತಿರುವ 600 ರೂಪಾಯಿಗಳ ವೇತನವನ್ನು 800 ರೂಗೆ ಏರಿಕೆ ಮಾಡಲಾಗಿದ್ದು, 3.66 ಸಾವಿರ ಫಲಾನುಭವಿಗಳು ಪ್ರಯೋಜನವಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ 90 ಕೋಟಿ ಹೆಚ್ಚು ವೆಚ್ಚವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
“ರೈತರ ಮಕ್ಕಳ ಉನ್ನತಿಯ ಬಗ್ಗೆ ಚಿಂತನೆ, ಬಡವರಿಗೆ ಸಹಾಯ ಮಾಡಲು ನನ್ನ ಸರ್ಕಾರದ ಆದ್ಯತೆ, ಈ ನಿಟ್ಟಿನಲ್ಲಿ ನನ್ನ ಚಿಂತನೆಯ ಮೊದಲ ಹೆಜ್ಜೆಯನ್ನು ಸಚಿವ ಸಂಪುಟದ ನಿರ್ಣಯದಲ್ಲಿ ಇಡಲಾಗಿದ್ದು, ಜನಕಲ್ಯಾಣ, ಬಡವ, ದೀನದಲಿತರ ಪರವಾಗಿ ಸರ್ಕಾರ ನಿಲ್ಲಲಿದೆ” ಎಂದು ಸಿಎಂ ಭರವಸೆ ನೀಡಿದ್ದಾರೆ.