ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿರುಪರಿಚಯ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದು, ಮಾಜಿ ಸಿಎಂ ದಿವಂಗತ ಎಸ್ ಆರ್ ಬೊಮ್ಮಾಯಿ ಪುತ್ರರೂ ಕೂಡ ಆಗಿರುವ ಬಸವರಾಜ ಬೊಮ್ಮಾಯಿ ಅವರ ಕಿರುಪರಿಚಯ.

ಬಾಲ್ಯ
ಬಸವರಾಜ ಬೊಮ್ಮಾಯಿ 1960ರ ಜನವರಿ 18ರಂದು ಧಾರಾವಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದವರು. ಬೊಮ್ಮಾಯಿ-ಗಂಗಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ (ಇಬ್ಬರು ಗಂಡು, ಇಬ್ಬರು  ಹೆಣ್ಣು) ಹಿರಿಯ ಮಗನೇ ಬಸವರಾಜ್‌ ಬೊಮ್ಮಾಯಿ. 28 ಜನವರಿ 1960ರಲ್ಲಿ ಜನಿಸಿದ ಬಸವರಾಜ್‌ ಬೊಮ್ಮಾಯಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದು, ಕೃಷಿ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇವರ ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕ್ರಿಕೆಟ್‌, ಗಾಲ್ಫ್‌ ಎಂದರೆ  ಬೊಮ್ಮಾಯಿಗೆ ಅಚ್ಚುಮೆಚ್ಚು. ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಧಾರವಾಡದ ಅಧ್ಯಕ್ಷರೂ ಅವರಾಗಿದ್ದರು. 

ರಾಜಕೀಯ ಪ್ರವೇಶ
ಆರಂಭದಲ್ಲಿ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಬೊಮ್ಮಾಯಿ 1995ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996–1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆಎಚ್‌ ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ 1997ರಲ್ಲಿ ಮೊದಲ  ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ‌(ಧಾರವಾಡ) ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಧಾನಸೌಧ ಪ್ರವೇಶಿಸಿದರು. ಹಾಗೆ ವಿಧಾನಸೌಧಕ್ಕೆ ಕಾಲಿಟ್ಟವರು ಮತ್ತೆ ತಿರುಗಿ ನೋಡಿದ್ದೇ ಇಲ್ಲ. 2003ರಲ್ಲಿಯೂ ಎಂಎಲ್‌ಸಿಯಾಗಿ ಪುನರಾಯ್ಕೆಯಾದರು.

ಸಂಯುಕ್ತ ಜನತಾದಳ (ಜೆಡಿಯು)ನಲ್ಲಿದ್ದ ಬಸವರಾಜ್‌ ಬೊಮ್ಮಾಯಿ ಅವರನ್ನು 2008ರಲ್ಲಿ ಸ್ವತಃ ಯಡಿಯೂರಪ್ಪ ಮುತುವರ್ಜಿ ವಹಿಸಿ ಬಿಜೆಪಿಗೆ ಕರೆದುಕೊಂಡು ಬಂದರು. ಫೆಬ್ರವರಿ 9ರಂದು ಜೆಡಿಯು ತೊರೆದು ಕಮಲ ಪಾಳಯ ಸೇರಿದ ಬೊಮ್ಮಾಯಿ ತಮ್ಮ ಸೋದರ ಮಾವ ಮಲ್ಲಪ್ಪ ಹುರುಳಿಕೊಪ್ಪಿ  1952ರಲ್ಲಿ ಪ್ರತಿನಿಧಿಸುತ್ತಿದ್ದ ಹಾವೇರಿಯ ಶಿಗ್ಗಾಂವ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂರು ಚುನಾವಣೆಗೆ ಸ್ಪರ್ಧಿಸಿ 2008ರಲ್ಲಿ ವಿಧಾನಸಭೆ ಪ್ರವೇಶಿಸಿದರು.

ಸಚಿವ ಸ್ಥಾನ
ಅಷ್ಟೇ ಅಲ್ಲ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರಬಲ ಜಲ ಸಂಪನ್ಮೂಲ ಹಾಗೂ ಸಹಕಾರ ಖಾತೆಯೂ ಅವರಿಗೆ ಸಿಕ್ಕಿತು. ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಬೊಮ್ಮಾಯಿ ಈ ಹಿಂದಿನ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ  ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಅದರಲ್ಲೂ ಮುಖ್ಯವಾಗಿ ಬಿಎಸ್‌ವೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಮುಂದೆ ಸಿಎಂ ಸ್ಥಾನ ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ನಡುವೆ ಬದಲಾದರೂ ಬೊಮ್ಮಾಯಿ ಮಾತ್ರ ಸಚಿವರಾಗಿ ಮುಂದುವರಿದರು. ವಿಶೇಷವೆಂದರೆ ಯಡಿಯೂರಪ್ಪ ಅವರಿಗೆ  ಅತ್ಯಾಪ್ತರಾಗಿದ್ದರೂ, ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬೊಮ್ಮಾಯಿ ಮಾತ್ರ ಬಿಜೆಪಿಯಲ್ಲೇ ಉಳಿದುಕೊಂಡು ಬಿಟ್ಟರು. ಬಿಎಸ್‌ವೈ ಮತ್ತೆ ಬಿಜೆಪಿ ಬರುತ್ತಿದ್ದಂತೆ ಬೊಮ್ಮಾಯಿ ಜತೆಗಿನ ಸ್ನೇಹ ಪುನಃ ಹಳೆ ದಿನಗಳಿಗೆ ಮರಳಿತು.

ಪರಿಣಾಮ ಈ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಅವರು ಬಿಜೆಪಿಯ ಹಿರಿತಲೆಗಳನ್ನೆಲ್ಲ ಹಿಂದಿಕ್ಕಿ ಪ್ರಭಾವಿ ಗೃಹ ಸಚಿವ ಸ್ಥಾನವನ್ನು ಪಡೆಕೊಂಡಿದ್ದರು. ಯಡಿಯೂರಪ್ಪ ಜತೆ ತೀರಾ ಆಪ್ತರಾಗಿರುವ 61 ವರ್ಷ ಬೊಮ್ಮಾಯಿ ಅವರು ಈಗ ಸಿಎಂ ಸ್ಥಾನವನ್ನೂ ಕೈ ವಶ ಮಾಡಿಕೊಂಡಿದ್ದಾರೆ.
 

Leave a Reply

Your email address will not be published. Required fields are marked *

error: Content is protected !!