ಬಿಜೆಪಿಯೇ ಅಧಿಕಾರ ಬಿಟ್ಟು ತೊಲಗಿದರೆ ಜನರದ್ದು ನೆಮ್ಮದಿಯ ಬದುಕಾಗುತ್ತೆ: ಸಿದ್ದರಾಮಯ್ಯ
ಬೆಂಗಳೂರು: ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾನ್ಯ ಜನರಿಗೇನು ಲಾಭ? ಅದರ ಬದಲು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಪಕ್ಷವೇ ಅಧಿಕಾರ ಬಿಟ್ಟು ತೊಲಗಿದರೆ ಜನ ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜನ ಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಬದಲಾವಣೆ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ, ಈ ವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಜಾನುವಾರುಗಳು ಸಾವಿಗೀಡಾಗಿವೆ. ಜನರ ಕಷ್ಟ ಅರಿತು ಅವರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಬಿಜೆಪಿ ನಾಯಕರು ನಾಯಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.
ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾನ್ಯ ಜನರಿಗೇನು ಲಾಭ? ಅದರ ಬದಲು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಪಕ್ಷ ಅಧಿಕಾರ ಬಿಟ್ಟು ತೊಲಗಿದರೆ ಜನ ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ.
ಇಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿನಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಿಗೆ ಬಿಎಸ್ವೈ ಅವರೇ ಉತ್ತಮ ಮುಖ್ಯಮಂತ್ರಿಯಾಗಿ ಕಂಡಿದ್ದಾರೆ ಎಂದು ಟೀಕಿಸಿದ್ದಾರೆ.