ಮಂಗಳೂರು: ದುರಂತ ತಪ್ಪಿಸಿದ ರೈಲ್ವೇ ಸಿಬ್ಬಂದಿಗೆ ನಗದು ಪುರಸ್ಕಾರ

ಮಂಗಳೂರು, ಜು.25 (ಉಡುಪಿ ಟೈಮ್ಸ್ ವರದಿ): ದೂಧ್ಸಾಗರ್-ಸೋನಾಲಿಮ್ ಭಾಗದಲ್ಲಿ ರೈಲು ಹಳಿ ತಪ್ಪಿದ ವಿಚಾರಕ್ಕೆ ಸಂಬಂಧಿಸಿ ರೈಲಿನ ಚಾಲಕ ಮತ್ತು ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಇದೀಗ ರೈಲನ್ನು ಚಲಾಯಿಸುತ್ತಿದ್ದ ವೇಳೆ ಸಂಭವಿಸಬಹುದಾದ ಅಪಾಯವನ್ನು ಅರಿತು ಪ್ರಯಾಣಿಕರನ್ನುಸುರಕ್ಷಿತವಾಗಿ ಕಾಪಾಡಿದ  ರೈಲಿನ ಚಾಲಕ ಮತ್ತು ಸಿಬ್ಬಂದಿಗಳ ಸಮಯಪ್ರಜ್ಞೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯರವರು ಶ್ಲಾಘಿಸಿದ್ದಾರೆ. ಅಲ್ಲದೆ ಪ್ರೋತ್ಸಾಹದ ರೂಪದಲ್ಲಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಜು.23 ರಂದು ಬೆಳಿಗ್ಗೆ ಸುಮಾರು 6.10ಕ್ಕೆ ಕುಲೇಮ್ ನಿಂದ ಕ್ಯಾಸೆಲ್ ರಾಕ್ ಕಡೆಗೆ ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬಯಿ ರೈಲು ಚಲಿಸುತ್ತಿತ್ತು. ಈ ವೇಳೆ  ದೂಧ್ಸಾಗರ್- ಸೋನಾಲಿಮ್ ಭಾಗದ ಕಿ.ಮೀ. ಸಂಖ್ಯೆ 39/800 ರ ಬಳಿ ಮುಂಭಾಗದ ಇಂಜಿನ್ನ ಲೋಕೋ ಪೈಲಟ್ ರಣ್ ಜಿತ್ ಕುಮಾರ್ ರವರು ಚಲಾಯಿ ಸುತ್ತಿದ್ದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದೆ ಟ್ರ್ಯಾಕ್ ನ ಮೇಲೆ ಬೆಟ್ಟದ ಪಾರ್ಶ್ವದಿಂದ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದ ಅವರು ಮುಂದೆ ಉಂಟಾಗಬಹುದಾದ ಅಪಾಯವನ್ನು ಊಹಿಸಿ ಕೂಡಲೇ ತುರ್ತು ಬ್ರೇಕ್ ಅನ್ನು ಪ್ರಯೋಗಿಸಿ ರೈಲನ್ನು ನಿಲ್ಲಿಸಿದರು. 

ಟ್ರ್ಯಾಕ್ ನ ಮೇಲೆ ಕೆಸರು ಮಿಶ್ರಿತ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದ್ದರೂ ಕೂಡಾ ಗಾಲಿಗಳ ಸಮೇತವಾಗಿ ಇಂಜಿನ್ ಹಳಿ ತಪ್ಪಿತು. ಅವರು ಕೂಡಲೇ ದೂಧ್ಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್ ರವರಿಗೆ ವಿಷಯ ತಿಳಿಸಿ ಹುಬ್ಬಳ್ಳಿಯ ನಿಯಂತ್ರಣ ಕಛೇರಿಗೆ ಮಾಹಿತಿ ನೀಡುವಂತೆ ಹೇಳಿದರು. ತುರ್ತು ಬ್ರೇಕ್ ಪ್ರಯೋಗವಾಗುತ್ತಿರುವುದನ್ನು ಗಮನಿಸಿದ ರೈಲಿನ ಗಾರ್ಡ್, ಶೈಲೇಂದರ್ ಕುಮಾರ್ ರವರು ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್ ನ ಹ್ಯಾಂಡ್ ಬ್ರೇಕ್ ಅನ್ನು ಪ್ರಯೋಗಿಸಿ ಇಂಜಿನ್ ನ ಹತ್ತಿರ ಹೋದರು. ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋಪೈಲಟ್ ಗಳು ಮುಂದಿನ ಮತ್ತು ಹಿಂಭಾಗದ (Banker) ಇಂಜಿನ್ ಗಳ ಸಹಾಯಕ ಲೋಕೋ ಪೈಲಟ್ ಗಳಿಗೆ ಟ್ರ್ಯಾಕ್ ನ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್ ಗಳನ್ನು ಇಡುವಂತೆ ಸೂಚಿಸಿದರು.  ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದರು, ವ್ಹೀಲ್ ಸ್ಕಿಡ್ ಗಳನ್ನು ಇರಿಸಿದರು ಮತ್ತು ಇತರ ಸುರಕ್ಷತಾ  ಕ್ರಮಗಳನ್ನು ಅನುಸರಿಸಿದರು.  
 ಸುರಕ್ಷತೆಗಾಗಿ  ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ ಈ ಮೂರು ಬೋಗಿಗಳನ್ನು ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು.

ಎಚ್ಚರಿಕೆ ಮತ್ತು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಹುಬ್ಬಳ್ಳಿ ವಿಭಾಗದ ನಿಯಂತ್ರಣ ಕಾರ್ಯಾಲಯದಿಂದ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸಿದರು. ಹಿಂಭಾಗದಲ್ಲಿ ಅಳವಡಿಸಲಾಗಿದ್ದ (ಬ್ಯಾಂಕಿಂಗ್)  ಇಂಜಿನ್ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಮರಳಿ ಕಳುಹಿಸಿದರು. ಗಾರ್ಡ್  ಶೈಲೇಂದರ್ ಕುಮಾರ್ ರವರು, ಲೋಕೋ ಪೈಲಟ್ ಎಸ್.ಡಿ. ಮೀನಾ, ಸಹಾಯಕ ಲೋಕೋ ಪೈಲಟ್ ಎಸ್.ಕೆ. ಸೈನಿಯ ವರೊಂದಿಗೆ ಪ್ರಯಾಣಿಕರಿದ್ದ ರೈಲನ್ನು ಸುರಕ್ಷಿತವಾಗಿ ಕುಲೇಮ್ ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
 
ಪ್ರಯಾಣಿಕರನ್ನು ಸುರಕ್ಷಿತ ಬೋಗಿಗಳಿಗೆ ಸ್ಥಳಾಂತರಿಸಿ ರೈಲನ್ನು ಮರಳಿ ಕುಲೇಮ್ ಗೆ ಕಳುಹಿಸುವ ಮೂಲಕ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ತೋರಿದ ರೈಲಿನ ಚಾಲಕ, ಸಿಬ್ಬಂದಿ (ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್, ಗಾರ್ಡ್) ಗಳ ಕಾರ್ಯ ಮೆಚ್ಚಿದ  ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ  ಗಜಾನನ ಮಲ್ಯರವರು ಪ್ರೋತ್ಸಾಹದ ರೂಪದಲ್ಲಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!