ಸಿಎಂ ಬದಲಾವಣೆ ವಿಚಾರ- ರಾಜ್ಯಾಧ್ಯಕ್ಷನಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ: ನಳಿನ್ ಕುಮಾರ್

ಉಡುಪಿ ಜು.25(ಉಡುಪಿ ಟೈಮ್ಸ್ ವರದಿ): ಬಿಜೆಪಿಗೆ ತಾಕತಿದ್ದರೆ ದಲಿತರನ್ನು ಸಿಎಂ ಮಾಡಲಿ ಎನ್ನುವ ಕಾಂಗ್ರೆಸ್ ಮೊದಲು  ದಲಿತರಿಗೆ ಏನು ಮಾಡಿದೆ ಎಂಬ ಬಗ್ಗೆ ತಿಳಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ವಾಜಪೇಯಿ ಸರ್ಕಾರ ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಯಡಿಯೂರಪ್ಪ, ಗೋವಿಂದ ಕಾರಜೋಳರನ್ನು ಉಪಮುಖ್ಯಮಂತ್ರಿ ಯಾಗಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಮಂತ್ರಿಮಂಡಲದಲ್ಲಿ ಶೇಕಡ 30 ಎಸ್ ಸಿ, ಎಸ್ ಟಿ ಮಂತ್ರಿಗಳು ಇದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ತಿಳಿಸಲಿ ಎಂದರು.

ಸಿದ್ದರಾಮಯ್ಯ ಹಿಂದೆ ಅಹಿಂದಾ ಹೋರಾಟ ಮಾಡಿ ಮುಖ್ಯಮಂತ್ರಿಯಾದರು. ಆದರೆ ಸಿಎಂ ಆದ ಬಳಿಕ ಅಹಿಂದ ಮರೆತರು. ಮುಖ್ಯಮಂತ್ರಿಯಾದ ಮೇಲೆ ಅವರು ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿ ಹಾಕಿದರು. ಕಾಂಗ್ರೆಸ್ ನಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ ಮತ್ತು ಖರ್ಗೆಯನ್ನು ಸೋಲಿಸಿದ ಇತಿಹಾಸ ಇದೆ. ಹೀಗಿರುವಾಗ ಅವರು ತಾಕತ್ ಇದ್ದರೆ ದಲಿತ ರನ್ನು ಸಿಎಂ ಮಾಡಿ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ವೇಳೆ ಸಿಎಂ ಬದಲಾವಣೆ ಬಗ್ಗೆ ಇಂದು ಹೈಕಮಾಂಡ್ ಸಂದೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬಿಜೆಪಿಯ ರಾಜ್ಯಾಧ್ಯಕ್ಷ, ಇವತ್ತಿನವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಕೇವಲ ಮಾಧ್ಯಮಗಳಿಂದ ಈ ವಿಚಾರ ತಿಳಿದು ಕೊಂಡಿದ್ದೇನೆ. ಈ ಬಗ್ಗೆ ನನಗೆ ಹೇಳಲು ಏನೂ ಇಲ್ಲ. ರಾಜ್ಯದ ಟ್ರ್ಯಾಕ್ಟರ್ ಈಗ ಯಡಿಯೂರಪ್ಪ ಬಿಡುತ್ತಿದ್ದಾರೆ ಎಂದು  ಹೇಳಿದರು.

ಇದೇ ವೇಳೆ ರಾಜ್ಯ ಪ್ರವಾಹ ಪರಿಸ್ಥಿತಿ, ಸಿಎಂ ಬದಲಾವಣೆ ವಿಚಾರ ನಡೆಯುತ್ತಿದೆ. ಎಲ್ಲಾ ಸಚಿವರು ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಎಲ್ಲರೂ ಆಯಾಯ ಜಿಲ್ಲೆಯಲ್ಲಿದ್ದು ನೆರೆ ಪರಿಹಾರದ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ ಮತ್ತು ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಂತ್ವನ ಹೇಳುತ್ತಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!