ಶಿರ್ವ: ಮಹಿಳಾ ಮಂಡಲ ಆಶ್ರಯದಲ್ಲಿ ಆಟಿದ ಸಂಭ್ರಮ

ಶಿರ್ವ: ಮಹಿಳಾ ಮಂಡಲ ಶಿರ್ವ ಇದರ ಆಶ್ರಯದಲ್ಲಿ ಆಟಿದ ಸಂಭ್ರಮ ಚಿಣ್ಣರು-2021 ಆನ್ ಲೈನ್ ಬೇಸಿಗೆ ಶಿಬಿರದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಗ್ರಾಮ ಪಂಚಾಯತ್ ನ ಪೌರ ಕಾರ್ಮಿಕರನ್ನು ಅಭಿನಂದಿಸುವ ಕಾರ್ಯಕ್ರಮವು ನಿನ್ನೆ ಶಿರ್ವದ ಮಹಿಳಾ ಸೌಧದಲ್ಲಿ ಜರುಗಿತು.

ವಿಜೇತಾ ಶೆಟ್ಟಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ ಅವರು ವಹಿಸಿದ್ದರು. ನಿರೂಪಕಿ ವಿಜೇತಾ ಸುವಿತ್ ಶೆಟ್ಟಿ ಅವರು ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿ ವರ್ಷದಲ್ಲೊಂದು ದಿನ ಕಾಟಾಚಾರಕ್ಕೆ ಎಂಬಂತೆ ಆಟಿಡೊಂಜಿ ದಿನ ಆಚರಿಸದೇ ಆಟಿ ತಿಂಗಳಿಡೀ ಆಟಿ ಸಂಭ್ರಮವನ್ನು ಆಚರಿಸುವ ಮೂಲಕ ತುಳುನಾಡಿನ ಜಾನಪದ ಸಂಸ್ಕೃತಿಯ ಸೊಗಡನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ನ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಶೇಖರ್, ಬಾಬು, ಉಮೇಶ್ ಹಾಗೂ ವಸಂತ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾದ ಕೆ.ಆರ್. ಪಾಟ್ಕರ್ ಅವರನ್ನು ಕೂಡಾ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು ನನ್ನನ್ನು ಸನ್ಮಾನಿಸಿದ್ದಕ್ಕಿಂತಲೂ ಪೌರ ಕಾರ್ಮಿಕರನ್ನು ಅಭಿನಂದಿಸಿದ ವಿಚಾರ ತುಂಬಾ ಖುಷಿ ಕೊಟ್ಟಿತು.ಎಂದು ಹೇಳಿ ಮಹಿಳಾ ಮಂಡಲದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಮೇ ತಿಂಗಳಲ್ಲಿ ಮಹಿಳಾ ಮಂಡಲದ ವತಿಯಿಂದ ನಡೆದ ಚಿಣ್ಣರು-2021ಆನ್ ಲೈನ್ ಬೇಸಿಗೆ ಶಿಬಿರದ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಸುಮಾರು 63 ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಸ್ಪೂರ್ತಿ ಶೆಟ್ಟಿ ಯವರು ಮಹಿಳಾ ಮಂಡಲದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಖಜಾಂಚಿ ಜೆಸಿಂತಾ ಮರಿಯಾ ಫುರ್ಟಾಡೋ ಹಾಗೂ ವನಿತಾ ದೇವೇಂದ್ರ ನಾಯಕ್ ಮತ್ತು ಶಾಹಿಸ್ತಾ ಬಹುಮಾನಿತರ ಪಟ್ಟಿಯನ್ನು ಓದಿದರು.

ಐರಿನ್ ಲುಸ್ರಾದೋ, ಗ್ಲಾಡಿಸ್ ಅಲ್ಮೇಡಾ ಅತಿಥಿಗಳನ್ನು ಪರಿಚಯಿಸಿದರು. ಜಯಶ್ರೀ ಜಯಪಾಲ್ ಧನ್ಯವಾದವಿತ್ತರು. ಉಪಾಧ್ಯಕ್ಷೆ ಸುಮತಿ ಜಯಪ್ರಕಾಶ್ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿ ಮಹಿಳಾ ಮಂಡಲದ ಜೊತೆ ಕಾರ್ಯದರ್ಶಿ ಗೀತಾ ಮೂಲ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪುಷ್ಪಾ ಆಚಾರ್ಯ, ಸುನೀತಾ ಸದಾನಂದ್, ದೀಪಾ ಶೆಟ್ಟಿ, ಶ್ರೀದೇವಿ, ಜಯಲಕ್ಷ್ಮಿಪೈ, ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅನಂತರಾಯ ಶೆಣೈ, ಚಿಣ್ಣರು ಶಿಬಿರದ ತೀರ್ಪುಗಾರರು, ವಿವಿಧ ಮಹಿಳಾ ಮಂಡಲಗಳ ಪ್ರತಿನಿಧಿಗಳು, ಕಲಾವಿದೆ ಕುಸುಮಾ ಕಾಮತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!