ಹೈಕಮಾಂಡ್’ನಿಂದ ಸಂಜೆಯೊಳಗೆ ಸಂದೇಶ- ಬಳಿಕ ಸೂಕ್ತ ತೀರ್ಮಾನ: ಬಿ.ಎಸ್ ಯಡಿಯೂರಪ್ಪ
ಬೆಳಗಾವಿ: ಇಂದು ಮುಖ್ಯಮಂತ್ರಿಗಳ ಮಾತಿನ ದಾಟಿ ನೋಡಿದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅವರ ಮುಖ್ಯಮಂತ್ರಿ ಅಧಿಕಾರಾವಧಿ ಕೊನೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಬಹುದು, ಸಂದೇಶ ಬಂದ ಕೂಡಲೇ ನಿಮಗೂ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿದೆ, ಆಸ್ತಿಪಾಸ್ತಿ, ಜನರಿಗೆ ಆಗಿರುವ ಸಂಕಷ್ಟ, ನಷ್ಟ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು .
ಇಂದು ಬೆಳಗಾವಿಯ ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿಂದ ಸಂದೇಶ ಬಂದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು, ಎರಡು ವರ್ಷಗಳ ಆಡಳಿತ ತೃಪ್ತಿ ನೀಡಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಜನರಿಗೆ ನನ್ನ ಆಡಳಿತ ತೃಪ್ತಿ ನೀಡಿದರೆ ಆಯಿತು ಎಂದರು.
ದಲಿತ ನಾಯಕ ಸಿಎಂ ಆಗಲಿದ್ದಾರೆಯೇ ಎಂದು ಕೇಳಿದ್ದಕ್ಕೆ ಮುಂದಿನ ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡುವುದು ನಾನಲ್ಲ, ಹೈಕಮಾಂಡ್, ಸ್ವಾಮೀಜಿಗಳು ಕೂಡ ನನ್ನ ಪರ ಸಮಾವೇಶ ಮಾಡುವ ಅಗತ್ಯವಿಲ್ಲ ಎಂದರು. ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಾಧ್ಯಕ್ಷ ನಡ್ಡಾ ಅವರ ಮೇಲೆ ನನಗೆ ನಂಬಿಕೆಯಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ಸ್ಟಿಂಗ್ ಆಪರೇಶನ್ ವಿಚಾರವಾಗಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ವಾಸ್ತವ ಸ್ಥಿತಿಗತಿಗಳನ್ನು ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ದೇವರ ದಯೆಯಿಂದ ಇಂದು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಹೆಚ್ಚು ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾಯಂಕಾಲ ವಾಪಸ್ಸಾಗುತ್ತೇವೆ ಎಂದರು.