ಮೊಟ್ಟೆ ವಿತರಣೆಯಲ್ಲೂ ಭ್ರಷ್ಟಾಚಾರ, ಸಚಿವೆ ಮಹಿಳಾ ಸಂಕುಲಕ್ಕೇ ಕಳಂಕ: ಉಡುಪಿ ಮಹಿಳಾ ಕಾಂಗ್ರೆಸ್

ಉಡುಪಿ: ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಸರಕಾರವು “ಮಾತೃಪೂರ್ಣ” ಯೋಜನೆಯಡಿ ನೀಡುತ್ತಿರುವ ಮೊಟ್ಟೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ಇಡೀ ಮಹಿಳಾ ಸಂಕುಲಕ್ಕೇ ಒಂದು ಕಳಂಕವಾಗಿ ಪರಿಣಮಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹೇಳಿದೆ. 

ಒಬ್ಬಮಹಿಳೆಯಾಗಿ,ತಾಯಿಯಾಗಿ ಮಹಿಳೆಯರ ಕಲ್ಯಾಣಕ್ಕಾಗಿ ಟೊಂಕಕಟ್ಟಿ ನಿಲ್ಲಬೇಕಾಗಿದ್ದ ಇಲಾಖಾ ಸಚಿವರ ವಕ್ರದೃಷ್ಟಿ ಗರ್ಭಿಣಿಯರಿಗೆ ನೀಡುವ ಮೊಟ್ಟೆಯ ಮೇಲೂ ಬಿದ್ದಿರುವುದು ನಾಚಿಕೆಗೇಡಿನ ವಿಚಾರ.ಭ್ರಷ್ಟಾಚಾರಕ್ಕೂ ಒಂದು ಮಿತಿ ಇರಬೇಕು. ತಾವೊಬ್ಬ ಮಹಿಳೆ ಎನ್ನುವುದನ್ನೂ ಮರೆತು ಮೊಟ್ಟೆಗಳನ್ನು ನುಂಗುವ ಬ್ರಹತ್ ಗಾತ್ರದ ತಿಮಿಂಗಿಲವಾಗಿ ಹೊರಬಿದ್ದಿರುವುದು  ಬಿಜೆಪಿಯ ಭ್ರಷ್ಟಾಚಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ.ಪ್ರತೀ ತಿಂಗಳೂ ತಮಗೆ ಐವತ್ತು ಲಕ್ಷ ಕಮಿಷನ್ ಕೊಡಿಸುವಂತೆ ಸಚಿವರು ಸೂಚಿಸಿರಬೇಕಾದರೆ ಅವರು ತಮ್ಮ ಇಡೀ ಆಡಳಿತಾವಧಿಯಲ್ಲಿ ಎಷ್ಟು ಕೋಟಿಗಳನ್ನು ಕೊಳ್ಳೆ ಹೊಡೆಯುವ ಸಂಚು ರೂಪಿಸಿರಬಹುದು?ಈ ಕೊರೋನಾ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ತರಿಸುತ್ತಿರುವ ಜನರಿರುವಾಗ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಸಚಿವರು,ಶಾಸಕರು ಕೋಟಿ ಕೋಟಿಗಳಲ್ಲಿ ಲೂಟಿ ಮಾಡುವ ಕಾಯಕದಲ್ಲಿ ತೊಡಗಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಕಿಡಿಕಾರಿದ್ದಾರೆ.

ಮಹಿಳೆಯರು ಮಂತ್ರಿಗಳಾದರೆ, ಶಾಸಕರಾದರೆ ಭ್ರಷ್ಟಾಚಾರ ಕಡಿಮೆಯಾದೀತು ಎಂದು ಎಲ್ಲರೂ ಅಭಿಪ್ರಾಯ ಪಡುತ್ತಾರೆ. ಆದರೆ ಶಶಿಕಲಾ ಜೊಲ್ಲೆಯಂತಹ ಮಹಿಳೆಯರು ನಮ್ಮನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ.ಇಂತಹ ಬ್ರಹ್ಮಾಂಡ ಭ್ರಷ್ಟಾಚಾರಮಾಡಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ಸಚಿವೆಯಾಗಿ ಅಷ್ಟೇ ಅಲ್ಲ,ಶಾಸಕಿಯಾಗಿಯೂ ಮುಂದುವರಿಯಲು ಅರ್ಹತೆಯನ್ನು ಉಳಿಸಿ ಕೊಂಡಿಲ್ಲ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಗೀತಾ ವಾಗ್ಳೆ ಒತ್ತಾಯಿಸಿದ್ದಾರೆ. ಈ ಭ್ರಷ್ಟಾಚಾರವನ್ನು ತಮ್ಮ ಕುಟುಕು ಕಾರ್ಯಾಚರಣೆಯ ಮೂಲಕ ಬಯಲಿಗೆಳೆದ ಸುದ್ದಿವಾಹಿನಿಯ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!