ಟೋಕಿಯೊ ಒಲಂಪಿಕ್ಸ್‌: ವೇಟ್‌ಲಿಫ್ಟಿಂಗ್ ನಲ್ಲಿ ಭಾರತದ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ -2020ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

49 ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಎತ್ತಿದ್ದಾರೆ. ಚೀನಾದ ಝಿಹೈ ಹು ಒಟ್ಟು 210 ಕೆಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿ ಹೊಸ ಒಲಿಂಪಿಕ್ ದಾಖಲೆಯನ್ನು ಸೃಷ್ಟಿಸಿದರೆ, ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ ಒಟ್ಟು 194 ಕೆಜಿ ತೂಕದೊಂದಿಗೆ ಕಂಚು ಪದಕ ಗಳಿಸಿದ್ದಾರೆ.

ಇಂದು ಸ್ಮರಣೀಯ ಗಳಿಗೆಯಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಚಾನು ಅವರು ಒಲಿಂಪಿಕ್ ಗೇಮ್ ನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗಳಿಸಿದ ಎರಡನೇ ಭಾರತೀಯರಾಗಿದ್ದಾರೆ. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ ನಲ್ಲಿ 69 ಕೆ ಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗಳಿಸಿದ್ದರು.

3-2 ಗೋಲುಗಳಿಂದ ನ್ಯೂಜಿಲೆಂಡ್ ಸೋಲಿಸಿ ಭಾರತ ಹಾಕಿ ಪುರುಷರ ತಂಡದ ಶುಭಾರಂಭ:

ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲು ಹಾಗೂ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ಇದರೊಂದಿಗೆ ಮನ್‌ಪ್ರೀತ್ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ.

ನಾಲ್ಕನೇ ಶ್ರೇಯಾಂಕಿತ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಗೆಲುವಿನ ಶುಭಾರಂಭ ಮಾಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಪಂದ್ಯದ ಆರನೇ ನಿಮಿಷದಲ್ಲಿ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ  ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. 

ಇದರೊಂದಿಗೆ ನ್ಯೂಜಿಲೆಂಡ್ ಹಾಕಿ ತಂಡವು ಮೊದಲ ಕ್ವಾರ್ಟರ್‌ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಇದಾಗಿ ಕೆಲ ಹೊತ್ತಿನಲ್ಲೇ, ಅಂದರೆ ಪಂದ್ಯದ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್‌ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಭಾನುವಾರ ಆಸ್ಟ್ರೇಲಿಯಾ ಜೊತೆ ಭಾರತ ತಂಡ ಪಂದ್ಯವಾಡುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!