ಕೃಷಿ ಸಹಾಯಕರ ನೇಮಕಾತಿಯಾಗಲಿ: ರವೀಂದ್ರ ಗುಜ್ಜರಬೆಟ್ಟು
ಉಡುಪಿ: ಆಡಳಿತಕ್ಕೆ ಬರುವ ಸರಕಾರಗಳು ರೈತರ ಏಳಿಗೆಗೆಂದು ಹಲವಾರು ಯೋಜನೆಗಳು, ಸವಲತ್ತುಗಳನ್ನು ರೂಪಿಸಿ ಜಾರಿಗೆ ತರುತ್ತಿರುತ್ತವೆ. ಆದರೆ ಸರಕಾರ ಜಾರಿಗೆ ತರುತ್ತಿರುವ ಬಹಳಷ್ಟು ಯೋಜನೆಗಳು, ಎಲ್ಲಾ ಕೃಷಿಕರ ಅರಿವಿಗೆ ಬರುವುದೇ ಇಲ್ಲ. ಹೀಗಿರುವಾಗ ಅವರಿಗೆ ಕೃಷಿ-ಯೋಜನೆ, ಸವಲತ್ತುಗಳು ಸಕಾಲದಲ್ಲಿ ಸಿಗುವುದಿಲ್ಲ. ಕೃಷಿಕರು ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಅವರಿಗೆ ಯೋಜನೆಗಳ ಮಾಹಿತಿ ತಿಳಿಯುವ ವೇಳೆಗೆ ಕಾಲಮಿತಿ ಎಲ್ಲ ಮುಗಿದಿರುತ್ತದೆಂದು ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೀಗಾಗಿ ಸರಕಾರ ಯಾರಿಗಾಗಿ, ಯಾವ ಉದ್ದೇಶಕ್ಕಾಗಿ ಕೃಷಿ ಯೋಜನೆಗಳನ್ನು ಜಾರಿಗೆತರುವುದೋ, ಅವರಿಗೆ ಸಕಾಲದಲ್ಲಿ ತಲುಪದೆ ವಿಫಲವಾಗುತ್ತಿದೆ. ಕೃಷಿಕರೂ ನಷ್ಟ ಅನುಭವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ರಾಜ್ಯದಾದ್ಯಂತ ಗ್ರಾಮ/ಕ್ಷೇತ್ರ ಮಟ್ಟಗಳಲ್ಲಿ ಕೃಷಿ ಇಲಾಖೆ ಮತ್ತು ರೈತರ ಮಧ್ಯೆ ಸಂಪರ್ಕಕೊಂಡಿಯಾಗಿ ಕಾಲ ಕಾಲಕ್ಕೆ ಕೃಷಿ ಯೋಜನೆ, ಸೌಲಭ್ಯಗಳ ಮಾಹಿತಿ ಸಕಾಲದಲ್ಲಿ ನೀಡಿ, ರೈತ ಸ್ನೇಹಿಗಳಾಗಿ ಕೆಲಸ ಮಾಡುತ್ತಿದ್ದ ಕೃಷಿ ಸಹಾಯಕ ಸಿಬಂದಿಗಳು ಇಲ್ಲದಿರುವುದು.
ಆದ್ದರಿಂದ ಕೃಷಿ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲರನ್ನು ಒತ್ತಾಯಿಸಿದೆ. ಈಗಾಗಲೆ ಕೃಷಿ ವಿಶ್ವವಿದ್ಯಾಲಯಗಳಿಂದ ಕೃಷಿ ಡಿಪ್ಲೋಮ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದರೆ ಸರಕಾರ ಮತ್ತು ಕೃಷಿಕರ ನಡುವಿನ ಹಲವಾರು ಸಮಸ್ಯೆಗಳು ಪರಿಹಾರವಾಗುವುದಲ್ಲದೆ ನಿರುದ್ಯೋಗ ಸಮಸ್ಯೆಯೂ ಒಂದಷ್ಟು ನಿವಾರಣೆಯಾಗಲಿದೆಂದು ತಿಳಿಸಿರುತ್ತಾರೆ.