ಉದಯ್ ಗಾಣಿಗ ಕೊಲೆ ಪ್ರಕರಣ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಜಾಮೀನು ಅರ್ಜಿ ವಜಾ

ಕುಂದಾಪುರ ಜು.23 (ಉಡುಪಿ ಟೈಮ್ಸ್ ವರದಿ): ಸಾಮಾಜಿಕ ಕಾರ್ಯಕರ್ತ ಯಡಮೊಗೆಯ ಉದಯ್ ಗಾಣಿಗ ಅವರ ಕೊಲೆ ಪ್ರಕರಣದ ಆರೋಪಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಬಂಧಿತ ಐವರು ಆರೋಪಿಗಳ ಪೈಕಿ ಬಾಲಚಂದ್ರ ಭಟ್ ತನ್ನ ವಕೀಲರ ಮೂಲಕ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಆದರೆ ಅರ್ಜಿ ವಿಚಾರಣೆ ನಡೆಸಿದ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಈ ಅರ್ಜಿ ವಿಚಾರಣೆ ವೇಳೆ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯ ನಾಶ ಸಂಭವವಿದೆ. ಮಾತ್ರವಲ್ಲದೆ ಆರೋಪಿಗೆ ಮತ್ತು ಮೃತ ವ್ಯಕ್ತಿಗೆ ವಿಚಾರವೊಂದರಲ್ಲಿ ಮನಸ್ತಾಪ ಇರುವುದು ಪ್ರಾಥಮಿಕ ತನಿಖಾ ಹಂತದಲ್ಲಿ ತಿಳಿದುಬಂದಿದೆ. ತನಿಖೆ ಇನ್ನು ನಡೆಯುತ್ತಿರುವ ಕಾರಣ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‍ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅದರಂತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜೂ.5 ರಂದು ರಾತ್ರಿ ವೇಳೆ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹಾಗೂ ಆತನ ತಂಡ ಉದಯ್ ಗಾಣಿಗ ಅವರ ಮೈಮೇಲೆ ಕಾರು ಹತ್ತಿಸಿ ಆ ಬಳಿಕ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿತ್ತು. ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಗ್ಗೆ ಉದಯ್ ಗಾಣಿಗ ಪತ್ನಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬಳಿಕ ಪ್ರಕರಣಕ್ಕೆ ಸಂಬಂಧಿಸಿ, ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಆರೋಪಿ ಪ್ರಾಣೇಶ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದ 2ನೇ ಆರೋಪಿ ರಾಜೇಶ್ ಭಟ್ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಮನೋಜ್ ಕುಮಾರ್ ಹಾಗೂ ಯಡಮೊಗೆ ಪಂಚಾಯತ್ ಸದಸ್ಯ ಸದಾಶಿವ ನಾಯ್ಕ್ ಎಂಬಾತನನ್ನು ಬಂಧಿಸಿದ್ದು, ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ಪ್ರಕರಣದ ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!