ಮಾಮೂಲಿ ಕೊಡದ ಅಮಾಯಕನ ಮೇಲೆ ಗಾಂಜಾ ಕೇಸ್- ಮಹಿಳಾ ಇನ್ಸ್‌ಪೆಕ್ಟರ್ ಸೇರಿ ಮೂವರ ಅಮಾನತು!
ಬೆಂಗಳೂರು: ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದ ಅಮಾಯಕನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಮಹಿಳಾ ಇನ್ಸ್‌ಪೆಕ್ಟರ್, ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತುಗೊಳಿಸಿದ್ದಾರೆ.
ಆರ್‌ಎಂಸಿ ಯಾರ್ಡ್ ಠಾಣೆಯ ಇನ್‌ಸ್ಪೆಕ್ಟರ್ ಪಾರ್ವತಮ್ಮ ಮತ್ತು ಸಬ್ ಇನ್‌ಸ್ಪೆಕ್ಟರ್ ಆಂಜಿನಪ್ಪ ತರಕಾರಿ, ಸೊಪ್ಪು ಮಾರುವ ಶಿವರಾಜ್ ಎಂಬಾತನ ವಿರುದ್ಧ ಗಾಂಜಾ ಸೇವಿಸಿದ ಸುಳ್ಳು ಪ್ರಕರಣ ದಾಖಲಿಸಿ ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ವರದಿ ನೀಡುವಂತೆ ಡಿಸಿಪಿಗೆ ಸೂಚಿಸಲಾಗಿತ್ತು. ಈ ಮಧ್ಯೆ ಇಲಾಖೆ ನಡೆಸಿದ ತನಿಖೆ ವೇಳೆ ಪಿಎಸ್‌ಐ ಆಂಜಿನಪ್ಪ ಡಿಸಿಪಿ ಅವರ ಮಾಮುಲಿ ನೀಡಬೇಕು ಎಂಬ ಹೇಳಿಕೆಯೂ ಆಡಿಯೋ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಈ ಸಂಬಂಧ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತನಿಖೆ ನಡೆಸಿ ಇಬ್ಬರು ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ವರದಿ ಸಲ್ಲಿಸಿದ್ದರು. ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೀದಿ ಬದಿ ತರಕಾರಿ, ಸೊಪ್ಪು ಮಾರುವ ಶಿವರಾಜ್ ಕಳೆದ ಶನಿವಾರ ರಾತ್ರಿ ಸ್ನೇಹಿತರ ಜತೆ ಮನೆ ಮುಂದೆ ಕುಳಿತಿದ್ದರು. ಈ ವೇಳೆ ರಾತ್ರಿ ಪಾಳಿಯ ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಪಾರ್ವತಮ್ಮ ಶಿವರಾಜ್ ಸೇರಿ ಇಬ್ಬರನ್ನು ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಠಾಣೆಗೆ ಕರೆತಂದಿದ್ದಾರೆ.
ಬಳಿಕ ಪಿಎಸ್‌ಐ ಆಂಜಿನಪ್ಪಗೆ ಪ್ರಕರಣ ದಾಖಲಿಸುವಂತೆ ಹೇಳಿದ್ದರು. ಆಗ ಶಿವರಾಜ್ ಜತೆ ಕರೆತಂದಿದ್ದ ವ್ಯಕ್ತಿ ಮೇಲೆ ಸಣ್ಣ-ಪುಟ್ಟ ಪ್ರಕರಣ ದಾಖಲಿಸಿ ಕಳುಹಿಸಿದ್ದಾರೆ. ಆದರೆ, ಶಿವರಾಜ್‌ಗೆ ಪಿಎಸ್‌ಐ ಆಂಜಿನಪ್ಪ, ಗಾಂಜಾ ತುಂಬಿದ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಮಾದಕ ವಸ್ತು ಸೇವನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿ, ದಂಡ ವಿಸಿ ಮರುದಿನ ಬೆಳಗ್ಗೆ ಮನೆಗೆ ಕಳುಹಿಸಿದ್ದರು.
ಈ ಘಟನೆಯಿಂದ ಬೇಸರಗೊಂಡ ಶಿವರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚೇತರಿಸಿಕೊಂಡು ವಿಡಿಯೋ ಮಾಡಿ ಪಿಐ ಮತ್ತು ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪಿಐ ಮತ್ತು ಪಿಎಸ್‌ಐ ಅವರನ್ನು ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪಿತ ವ್ಯಕ್ತಿಗಳನ್ನು ಠಾಣೆಗೆ ಕರೆತಂದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಜತೆಗೆ ಶಿವರಾಜ್‌ಗೆ ಸಿಗರೇಟ್ ಸೇದುವಂತೆ ಬಲವಂತ ಮಾಡಿರುವುದು ಪತ್ತೆಯಾಗಿದೆ. ಮರು ದಿನ ಮಾಧ್ಯಮಗಳಲ್ಲಿ ವಿಷಯ ಪ್ರಸಾರವಾದ ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ನಾಲ್ವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.