ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ತೆಗೆದುಕೊಂಡಿರುವ ನಿರ್ಧಾರಗಳಿಂದಲೇ ಹೆಚ್ಚು ಸಾವು- ರಾಹುಲ್ ಗಾಂಧಿ
ನವದೆಹಲಿ, ಜು.22 : ಕೇಂದ್ರ ಸರಕಾರದ ತಪ್ಪು ನಿರ್ಧಾರಗಳಿಂದಲೇ ಕೋವಿಡ್ ಎರಡನೇ ಅಲೆಗೆ 50 ಲಕ್ಷ ಭಾರತೀಯರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, “ಕೇಂದ್ರ ಸರ್ಕಾರವು ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತೆಗೆದುಕೊಂಡಿರುವ ನಿರ್ಧಾರಗಳಿಂದಲೇ ಹೆಚ್ಚು ಸಾವು ಸಂಭವಿಸಿದ್ದು, ಕೊರೊನಾದ ಎರಡನೇ ಅಲೆಯಲ್ಲಿ 50 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹಾಗೂ ತಮ್ಮ ಟ್ವೀಟ್ ನಲ್ಲಿ ಜೂನ್ 2021ರ ವರೆಗೆ ಮರಣ ಪ್ರಮಾಣವನ್ನು ಅಂದಾಜು ಮಾಡಿರುವ ಜಾಗತಿಕ ಅಭಿವೃದ್ಧಿ ಕೇಂದ್ರದ ಹೊಸ ಅಧ್ಯಯನದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಅಧ್ಯಯನದ ಪ್ರಕಾರ ಭಾರತದಲ್ಲಿ ಕೊರೊನಾ ಸೋಂಕಿನಿಂದ ಸುಮಾರು 4.18 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದರೊಂದಿಗೆ “ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಯಲ್ಲಿ ಜೀವ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಕ್ಕೂ ನಿರಾಕರಿಸಿದ್ದು,ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರ ಕಣ್ಣೀರಲ್ಲಿ ಎಲ್ಲವೂ ದಾಖಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ