ದ್ವಿತೀಯ ಪಿಯುಸಿ ಫಲಿತಾಂಶ ಕುರಿತು ಅಸಮಧಾನವಿದ್ದಲ್ಲಿ ಜು.30 ರೊಳಗೆ ಅರ್ಜಿ ಸಲ್ಲಿಸಿ- ಸಚಿವ ಸುರೇಶ್ ಕುಮಾರ್
ಬೆಂಗಳೂರು, ಜು 21: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಫಲಿತಾಂಶದ ಕುರಿತು ಯಾರಿಗಾದರೂ ಅಸಮಧಾನವಿದ್ದಲ್ಲಿ ಜು. 30 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳು ಜು.30ರೊಳಗೆ ಅರ್ಜಿ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು. ಫಲಿತಾಂಶ ರದ್ದುಪಡಿಸಿಕೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ” ಎಂದಿದ್ದಾರೆ.
ಸಲ್ಲಿಕೆಯಾದ ಅರ್ಜಿಗಳನ್ನು ಪ್ರಾಂಶುಪಾಲರು ಸ್ಟೂಟೆಂಟ್ಸ್ ಅಜಿವ್ಮೆಂಟ್ ಟ್ರ್ಯಾಕಿಂಗ್ ಪೋರ್ಟಲ್ನಲ್ಲಿ ದಾಖಲಿಸಲು ಜು. 30 ಕೊನೆಯ ದಿನವಾಗಿದೆ. ಅರ್ಜಿಯನ್ನು ಜು. 31 ರೊಳಗೆ ಕಡ್ಡಾಯವಾಗಿ ತಮ್ಮ ತಮ್ಮ ಜಿಲ್ಲಾ ಉಪನಿರ್ದೇಶಕ ಕಚೇರಿಗೆ ಸಲ್ಲಿಸಬೇಕು. ಈ ಅರ್ಜಿಗಳನ್ನು ಆ.2 ರೊಳಗೆ ಉಪ ನಿರ್ದೇಶಕರು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಬೇಕು” ಎಂದು ತಿಳಿಸಿದ್ದಾರೆ.
ಈ ವೇಳೆ ಪಿಯು ಪರೀಕ್ಷಾ ಶುಲ್ಕ ಮರುಪಾವತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದರೂ ಕೂಡಾ ಫಲಿತಾಂಶ ನೀಡಲು ಇಲಾಖೆಗೆ ಹಾಲಿ ಸಂಗ್ರಹಿಸಿರುವ ಪರೀಕ್ಷಾ ಶುಲ್ಕದ ಮೊತ್ತಕ್ಕಿಂತ ಅಧಿಕ ವೆಚ್ಚ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆಗಿದೆ. ಈ ಹಿನ್ನೆಲೆ ಪರೀಕ್ಷಾ ಶುಲ್ಕ ವಾಪಾಸ್ಸು ನೀಡಲಾಗುವುದಿಲ್ಲ” ಎಂದು ತಿಳಿಸಿದ್ದಾರೆ.