ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಚಿಂತಾಜನಕ- ಹಲವು ಮುಖಂಡರ ಭೇಟಿ

ಮಂಗಳೂರು ಜು.21(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಕಾಂಗ್ರೆಸ್‍ನ ಹಿರಿಯ ಪ್ರಭಾವಿ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಆರೋಗ್ಯವನ್ನು ಪರಿಶೀಲಿಸುತ್ತಿರುವ ಹಿರಿಯ ವೈದ್ಯರಾದ ಡಾ.ಎ. ರಾಜ ಅವರು, ಆಸ್ಕರ್ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ನಡೆಯುತ್ತಿರುವುದರಿಂದ ಅವರ ಆರೋಗ್ಯ ಚೇತರಿಕೆಯ ಪರಿಸ್ಥಿತಿ ನೋಡಿಕೊಂಡು 2 ದಿನಗಳ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಆಸ್ಕರ್ ಫೆರ್ನಾಂಡಿಸ್ ಅವರ ಕುಟುಂಬದವರ ಬಳಿ ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ನಡುವೆ ಕಾಂಗ್ರೆಸ್‍ನ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್, ಎಂ.ಬಿ ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ವೇಳೆ ತಮ್ಮ ಬಹುಕಾಲದ ಸ್ನೇಹಿತನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದ ಕಾಂಗ್ರೆಸ್‍ನ ಮತ್ತೋರ್ವ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರು ತಮ್ಮ ಸ್ನೇಹಿತನ ಆರೋಗ್ಯ ಸ್ಥಿತಿ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಅವರಿಗೇನು ಆಗುವುದಿಲ್ಲ, ಅವರು ಗುಣಮುಖರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಆಸ್ಕರ್ ಫೆರ್ನಾಂಡಿಸ್‌ರವರು ಶೀಘ್ರ ಗುಣಮುಖರಾಗಲು ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥಿಸಲು ಮನವಿ:
ಉಡುಪಿ ಜಿಲ್ಲೆಯ ಹೆಮ್ಮೆಯ ಪುತ್ರ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್‌ರವರು ಅಸ್ವಸ್ಥರಾಗಿ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓಸ್ಕರ್‌ರವರ ಆರೋಗ್ಯ ಸುಧಾರಿಸಿ ಶೀಘ್ರ ಗುಣಮುಖ ಹೊಂದಲು ಉಡುಪಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಅವರವರ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥಿಸಬೇಕೆಂಬುವುದು ಜಿಲ್ಲಾ ಕಾಂಗ್ರೆಸ್‌ನ ಅರಿಕೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಕಾರ್ಯಕರ್ತರಲ್ಲಿ ವಿನಂತಿಸಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!