ದುಬೈನಿಂದ ಪಾರ್ಸೆಲ್ ಕಳುಹಿಸಿ ಪತ್ನಿಯ ಹತ್ಯೆ- ಆರು ತಿಂಗಳ ಮೊದಲೇ ಸಂಚು!

ಉಡುಪಿ ಜು.21(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ವಿಶಾಲ ಗಾಣಿಗೆ ಕೊಲೆ ನಡೆದ ಒಂದೇ ವಾರದ ಅಂತರದಲ್ಲಿ ಪೊಲೀಸರು ಪ್ರಕರಣವನ್ನು ಭೇಧಿಸಿದ್ದಾರೆ. ಕ್ಷಿಪ್ರವಾಗಿ ಪ್ರಕರಣವನ್ನು ಭೇದಿಸಿದ ತನಿಖಾ ತಂಡಕ್ಕೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ 50,000 ರೂ ಬಹುಮಾನ ಘೋಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 5 ವಿಶೇಷ ತನಿಖಾ ತಂಡವನ್ನು ರಚಿಸಿದ ಪೊಲೀಸರು ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಲಭ್ಯವಾದ ಸುಳಿವಿನಂತೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ ಪೊಲೀಸರು, ಉತ್ತರ ಪ್ರದೇಶದ ಗೋರಖ್ ಪುರ್ ನ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಸ್ವಾಮಿನಾಥ ನಿಶಾದ(38) ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಈ ವೇಳೆ ಬಂಧಿತ ನೀಡಿದ ಮಾಹಿತಿಯಂತೆ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು 6 ತಿಂಗಳ ಹಿಂದೆಯೇ ಪತ್ನಿಯ ಹತ್ಯೆಗೆ ಸಂಚು ರೂಪಿಸಿ ದುಬೈಯಲ್ಲೇ ಇದ್ದು ಕೊಂಡು ಸುಪಾರಿ ಕಿಲ್ಲರ್ ಗಳಿಗೆ 2 ಲಕ್ಕಕ್ಕೂ ಅಧಿಕ ಹಣ ನೀಡಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಹತ್ಯೆಗೆ 6 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ ಪತಿ ರಾಮಕೃಷ್ಣ ಪತ್ನಿಯ ಚಲನವಲನ ತಿಳಿಯುವ ಸಲುವಾಗಿ ಹಿಂದೊಮ್ಮೆ ಪಾರ್ಸೆಲ್ ಇರುವುದಾಗಿ ತಿಳಿಸಿ ಫ್ಲಾಟ್ ಗೆ ಒಬ್ಬಂಟಿಯಾಗಿ ಬರುವಂತೆ ಪ್ರೇರೇಪಿಸಿದ್ದ. ಇದೇ ಮಾದರಿಯಲ್ಲಿ ಕೃತ್ಯ ನಡೆದ ದಿನವೂ ಆರೋಪಿ ಪತಿ ಪಾರ್ಸೆಲ್ ಇರುವುದಾಗಿ ತಿಳಿಸಿ ಫ್ಲಾಟ್‍ಗೆ ಒಂಟಿಯಾಗಿ ಬರುವಂತೆ ಮಾಡಿದ್ದಾನೆ. ಈ ನಡುವೆ ತಾನೇ ದುಡ್ಡು ಕೊಟ್ಟು ಸಿದ್ದ ಮಾಡಿದ್ದ ಸುಪಾರಿ ಕಿಲ್ಲರ್‍ಗಳ ಮೂಲಕ ಪತ್ನಿಯನ್ನು ಕೊಂದಿದ್ದ.

ಮಾರ್ಚ್ ನಲ್ಲೇ ಪತ್ನಿಯ ಹತ್ಯೆಗೆ ಸಂಚು: ಆರೋಪಿ ಪತಿ ರಾಮಕೃಷ್ಣ ದುಬೈನಿಂದ ಊರಿಗೆ ಬಂದಿದ್ದ ವೇಳೆ ಉಪ್ಪಿನಕೋಟೆಯ ಫ್ಲ್ಯಾಟ್‍ಗೆ ಆರೋಪಿಗಳನ್ನು ಕರೆಯಿಸಿಕೊಂಡು ತನ್ನ ಗೆಳೆಯರೆಂದು ಪತ್ನಿ ವಿಶಾಲ ಗಾಣಿಗ ಅವರಿಗೆ ಪರಿಚಯಿಸಿದ್ದ. ಅಲ್ಲದೆ ತನ್ನ ಕೃತ್ಯ ಸಾಧಿಸಲು ಮನೆಯನ್ನೆಲ್ಲಾ ತೋರಿಸಿದ್ದ. ಅದರಂತೆ ಪತ್ನಿ ಹಾಗೂ ಮಗಳು ಊರಿನಲ್ಲಿ ಇದ್ದ ವೇಳೆ ಆರೋಪಿಗಳಿಗೆ 2ಲಕ್ಷಕ್ಕೂ ಅಧಿಕ ಮೊತ್ತ ನೀಡಿ ಸುಪಾರಿ ಕಿಲ್ಲರ್ ಗಳನ್ನು ಊರಿಗೆ ಕಳುಹಿಸಿ ಹತ್ಯೆ ಮಾಡಿಸಿದ್ದ.

ಪೊಲೀಸ್ ವಿಚಾರಣೆ ವೇಳೆ ಈ ಕೊಲೆಗೆ ಪತಿ ಪತ್ನಿ ನಡುವಿನ ವೈಮನಸ್ಸು ಕಾರಣ ಎಂದು ತಿಳಿದು ಬಂದಿದೆ. ಆದರೆ ಯಾವ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದರು.

ಘಟನೆ ದಿನ ಪಾರ್ಸೆಲ್ ನೆಪವೊಡ್ಡಿ ಫ್ಲಾಟ್ ಗೆ ಬರುವಂತೆ ತಿಳಿಸಿದ್ದ ಆರೋಪಿ ಪತಿ, ದಾರಿ ಮಧ್ಯೆ ವಿಶಾಲ ಅವರಿಗೆ ಕರೆಮಾಡಿ ಅವರ ಬರುವಿಕೆ ಬಗ್ಗೆ ಖಚಿತ ಪಡಿಸಿಕೊಂಡು ಆರೋಪಿಗಳಿಗೆ ಮಾಹಿತಿ ರವಾನಿಸಿದ್ದಾನೆ. ಅದರಂತೆ ಇಬ್ಬರೂ ಆರೋಪಿಗಳು ಫ್ಲಾಟ್‍ಗೆ ತೆರಳಿದ್ದಾರೆ. ಈ ಇಬ್ಬರೂ ಆರೋಪಿಗಳನ್ನು ಮೊದಲೇ ಸ್ನೇಹಿತರು ಎಂದು ಪರಿಚಹಿಸಿದ್ದ ಕಾರಣ, ಪತಿಯ ಕುತಂತ್ರ ಅರಿಯದೇ ಘಟನೆ ದಿನ ಫ್ಲಾಟ್ ಗೆ ಬಂದಿದ್ದ ಆರೋಪಿಗಳ ಬಗ್ಗೆ ಯಾವುದೇ ಅನುಮಾನ ಪಡದೆ ಫ್ಲಾಟ್‍ನ ಒಳಗೆ ಕರೆಸಿ ಕೊಂಡಿದ್ದಾರೆ. ಮೊದಲೇ ರೂಪಿಸಿದ ಸಂಚಿನಂತೆ ಜು.12 ರಂದು ಫ್ಲಾಟ್ ಗೆ ಬಂದಿದ್ದ ಆರೋಪಿಗಳು ವಿದ್ಯುತ್ ಪವರ್ ಕೇಬಲ್ ಮತ್ತು ಚಾರ್ಜರ್ ಪವರ್ ಕೇಬಲ್ ನಿಂದ ಕುತ್ತಿಗೆ ಬಿಗಿದು, ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯದ ದಿಕ್ಕು ತಪ್ಪಿಸುವ ಸಲುವಾಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. 

ದುಬೈನಲ್ಲಿದ್ದುಕೊಂಡು ಪತಿ ರಾಮಕೃಷ್ಣ ಕೃತ್ಯ ಎಸಗಿದ್ದ ಕುಕೃತ್ಯ ಯಾರಿಗೂ ತಿಳಿಯುವುದಿಲ್ಲ, ಪೊಲೀಸರು ಈ ಬಗ್ಗೆ ತನ್ನನ್ನು ಹೆಚ್ಚು ವಿಚಾರಿಸುವುದಿಲ್ಲ ಅಂದುಕೊಂಡು ಆರಂಭದಲ್ಲಿ ರಾಮಕೃಷ್ಣನನ್ನು ವಿಚಾರಣೆ ನಡೆಸಿದಾಗ ಆತ ತಾನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುತ್ತಲೇ ಬಂದಿದ್ದ. ಅಲ್ಲದೆ ಇತರರ ಮೇಲೆ ಆರೋಪ ಹೊರಿಸಿದ್ದ. ಬಳಿಕ ತನಿಖೆ ತೀವ್ರಗೊಳಿಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಫ್ಲಾಟ್‍ನ ಮಾಲೀಕರಿಗೆ ಪೊಲೀಸರು ನೋಟಿಸ್: ಘಟನೆ ವೇಳೆ ಫ್ಲಾಟ್ ನಲ್ಲಿ ಸಿಸಿಟಿವಿ ಇಲ್ಲದೇ ಇದ್ದುದರಿಂದ ಪೊಲೀಸರ ತನಿಖೆಗೆ ಹಿನ್ನಡೆಯಾಗಿತ್ತು. ಆದ್ದರಿಂದ ಇದೀಗ ಮುಂಜಾಗೃತಾ ಕ್ರಮವಾಗಿ ಸಿಸಿಟಿವಿ ಅಳವಡಿಸುವಂತೆ ಫ್ಲಾಟ್‍ನ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದಂತೆ ಬ್ರಹ್ಮಾವರ ಠಾಣೆಯ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಠಾಣೆಯ ಪಿ.ಐ ಮಂಜುನಾಥ, ಮಲ್ಪೆವೃತ್ತ ಕಚೇರಿಯ ಸಿಪಿಐ ಶರಣಗೌಡ, ಉಡುಪಿ ನಗರ ಠಾಣೆಯ ಪಿಐ ಪ್ರಮೋದ್, ಕಾರ್ಕಳ ಸಿಪಿಐ ಸಂಪತ್ ಕುಮಾರ್ ಎ, ಬ್ರಹ್ಮಾವರ ಪಿಎಸ್‍ಐ ಗುರುನಾಥ ಬಿ ಹಾದಿಮನಿ, ಕಾರ್ಕಳ ನಗರ ಠಾಣೆ ಪಿಎಸ್ ಐ ಮಧು, ಕಾಪು ಪಿಎಸ್‍ಐ ರಾಘವೆಂದ್ರ,  ಶಂಕರ ನಾರಾಯಣ ಠಾಣೆಯ ಪಿಎಸ್‍ಐ ಶ್ರೀಧರ ನಾಯ್ಕ, ಬ್ರಹ್ಮಾವರ ಠಾಣೆಯ ಪಿಎಸ್‍ಐ  ಕೆ.ಆರ್.ಸುನಿತಾ, ಕೋಟ ಠಾಣೆಯ ಪಿಎಸ್‍ಐ  ಸಂತೋಷ ಬಿಪಿ, ಬ್ರಹ್ಮಾವರ ವೃತ್ತಕಚೇರಿಯ ಎಎಸ್‍ಐ ಕೃಷ್ಣಪ್ಪ , ಎಎಸ್‍ಐ

ಗೋಪಾಲ ಪೂಜಾರಿ, ನಾರಾಯಣ, ಕೆ.ಎಸ್., ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಯವರಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ,  ಪ್ರವೀಣ ಶೆಟ್ಟಿಗಾರ್, ಪ್ರದೀಪ್ ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ,  ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ. ಶಾಂಭವಿ ಮಹಮ್ಮದ್ ಆಜ್ಮಲ್ ದಿಲೀಪ್ ಕುಮಾರ್, ರವೀಂದ್ರ ಎಚ್, ಪ್ರಕಾಶ, ಬಸೀರ್, ಸಂದೀಪ್‍ಪಿಕೆ, ವಿಕ್ರಮ್, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ, ನಿತಿನ್ ಚಾಲಕರಾದ ಶೇಖರ್ , ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!