ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್. ಕೆ ಅವರಿಗೆ ಕಾರ್ಕಳದಲ್ಲಿ ಸ್ವಾಗತ

ಉಡುಪಿ: ಮಾನವೀಯ ಮೌಲ್ಯಗಳನ್ನು ಜನರ ಮನದಲ್ಲಿ ಉದ್ಧೀಪನಗೊಳಿಸುವ ಸದುದ್ಧೇಶದೊಂದಿಗೆ ಬೀದರ್ ಜಿಲ್ಲೆಯ ಔರಾದ್ ನ ಗಡಿ ಗ್ರಾಮದಿಂದ 2020ರ ನವೆಂಬರ್ ಒಂದರಂದು “ಜ್ಞಾನಭಿಕ್ಷಾ ಪಾದಯಾತ್ರೆ” ಆರಂಭಿಸಿದ ಬೆಂಗಳೂರಿನ ಲೇಖಕ, ಚಿಂತಕ, ಇಂಜಿನಿಯರ್ ವಿವೇಕಾನಂದ ಎಚ್. ಕೆ. ಅವರು 18 ಜಿಲ್ಲೆಗಳ ಪಾದಯಾತ್ರೆ ಮುಗಿಸಿ 19ನೇ ಜಿಲ್ಲೆಯಾಗಿ 262 ನೇ ದಿನವಾದ  ಜುಲೈ 20ರಂದು ಸಂಜೆ ಉಡುಪಿ ಜಿಲ್ಲೆ ಪ್ರವೇಶಿಸಿದಾಗ ಕಾರ್ಕಳದಲ್ಲಿ ಅವರಿಗೆ ಪ್ರೀತಿಪೂರ್ವಕ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

“ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ, ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿ” ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸುತ್ತಿರುವ  ವಿವೇಕಾನಂದ ಎಚ್. ಕೆ ಅವರು, ಸೋಮವಾರ ಬೆಳಗ್ಗೆ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಿಂದ ಎಸ್. ಕೆ. ಬಾರ್ಡರ್, ಬಜಗೋಳಿ ಆಗಿ ಕಾರ್ಕಳಕ್ಕೆ ಆಗಮಿಸಿದರು.

ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದ ಬಳಿ ಕಾರ್ಕಳದ ಮಹಾಜನತೆಯ ಪರವಾಗಿ ಪುರಸಭಾ ಸದಸ್ಯರಾದ ಶುಭದ್ ರಾವ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುಹಮ್ಮದ್ ಶರೀಫ್, ಎಣ್ಣೆಹೊಳೆ ರಾಧಾ ನಾಯಕ್ ಪ್ರೌಢಶಾಲೆಯ ಶಿಕ್ಷಕರಾದ ರಾಜಾರಾಮ್ ಶೆಟ್ಟಿ, ಶಂಕರ್, ಸತೀಶ್, ಚೇತನ್ ರಾವ್, ಜಾಗೃತಿ ಫೌಂಡೇಶನ್ ಸಂಚಾಲಕ ಸಿಯಾ ಸಂತೋಷ್ ನಾಯಕ್ ಮೊದಲಾದವರು ಶಾಲು ಹೊದೆಸಿ ಹಾರ ಹಾಕಿ ವಿವೇಕಾನಂದ ಎಚ್. ಕೆ ಅವರನ್ನು ಗೌರವಿಸಿ ಸ್ವಾಗತಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿದ ವಿವೇಕಾನಂದರು, ಗೊಮ್ಮಟೇಶ್ವರ ಬೆಟ್ಟವನ್ನು ಸಂದರ್ಶಿಸಿದ ಬಳಿಕ ಕಾರ್ಕಳದಲ್ಲಿ ವಾಸ್ತವ್ಯ ಹೂಡಿದರು ಹಾಗೂ ಕಾರ್ಕಳದ ಸಹೃದಯರೊಂದಿಗೆ ಸೌಹಾರ್ದ ಸಂವಾದ ನಡೆಸಿದರು.ಮಂಗಳವಾರ ಬೆಳಗ್ಗೆ ಕಾರ್ಕಳ ದಿಂದ ಹೆಬ್ರಿ ಕಡೆಗೆ ಪಾದಯಾತ್ರೆ ಮುಂದುವರಿಸಲಿರುವ ಅವರು, ಬಳಿಕ ಕುಂದಾಪುರ, ಕೋಟ, ಬ್ರಹ್ಮಾವರ, ಉಡುಪಿ, ಮ0ಗಳೂರು ಮೂಲಕ ಮುಂದುವರಿದು ಚಾಮರಾಜನಗರ ಜಿಲ್ಲೆಯ ಗಡಿಗ್ರಾಮದಲ್ಲಿ ಪಾದಯಾತ್ರೆಯನ್ನು ಸಮಾಪನಗೊಳಿಸಲಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಮತ್ತು ಉಪನ್ಯಾಸ, ಸಂವಾದ ಆಯೋಜಿಸಲು ಆಸಕ್ತಿ ಇರುವವರು ವಿವೇಕಾನಂದರನ್ನು ಸಂಪರ್ಕಿಸಬಹುದು-9844013068.

Leave a Reply

Your email address will not be published. Required fields are marked *

error: Content is protected !!