ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದ ಸಾವುಂಟಾಗಿಲ್ಲ- ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್ ಎರಡನೇ ಅಲೆಯ ಸಂದರ್ಭ ಆಮ್ಲಜನಕ ಕೊರತೆಯಿಂದ ಸಾವಾಗಿರುವ ಬಗ್ಗೆ ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ. ಆದರೆ, ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆಯಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ. ನಂತರ, ರಾಜ್ಯಗಳ ನಡುವೆ ಸಮನಾದ ವಿತರಣೆಗೆ ಅನುಕೂಲವಾಗುವಂತೆ ಕೇಂದ್ರವು ಹೆಜ್ಜೆ ಇಡಬೇಕಾಯಿತು ಎಂದು ಅದು ಹೇಳಿದೆ.

2ನೇ ಅಲೆಯ ಸಂದರ್ಭದಲ್ಲಿ ತೀವ್ರ ಪ್ರಮಾಣದ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ರೋಗಿಗಳು ರಸ್ತೆ ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಆರೋಗ್ಯವು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಕೇಂದ್ರಕ್ಕೆ ವರದಿ ಮಾಡುತ್ತವೆ ಎಂದು ಹೇಳಿದರು.

‘ಕೋವಿಡ್ ಸಾವುಗಳನ್ನು ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅದರಂತೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ವರದಿ ಮಾಡುತ್ತಿವೆ. ಆದರೂ, ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ಸಂಭವಿಸಿರುವ ಬಗ್ಗೆ ನಿರ್ದಿಷ್ಟವಾಗಿ ವರದಿ ಬಂದಿಲ್ಲ.’ ಎಂದು ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ”

Leave a Reply

Your email address will not be published. Required fields are marked *

error: Content is protected !!