ಸಂಸತ್ತಿನಲ್ಲಿ ಇಂತಹ ‘ನಕಾರಾತ್ಮಕ ಮನಸ್ಥಿತಿ’ ಎಂದಿಗೂ ಕಂಡಿರಲಿಲ್ಲ: ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಗೆ ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ಪರಿಚಯಿಸವ ವೇಳೆ ಗದ್ದಲ ಎಬ್ಬಿಸಿದ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಇಂತಹ ‘ನಕಾರಾತ್ಮಕ ಮನಸ್ಥಿತಿ’ ಸಂಸತ್ತಿನಲ್ಲಿ ಹಿಂದೆಂದೂ ಕಂಡುಬಂದಿಲ್ಲ ಎಂದು ಹೇಳಿದರು.

ನೂತನ ಸಚಿವರನ್ನು ಪರಿಚಯಿಸಲು ಲೋಕಸಭೆಯಲ್ಲಿ ಪ್ರಧಾನಿ ಏಳುತ್ತಿದ್ದಂತೆ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಾ ಕೋಲಾಹಲ ಸೃಷ್ಟಿಸಿದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೋದಿ, ಹಲವಾರು ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಅನೇಕ ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬುದು ಎಲ್ಲರಿಗೂ ಹೆಮ್ಮೆ ತರುತ್ತದೆ.

‘ಹೆಚ್ಚಿನ ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದಕ್ಕೆ ಸೇರಿದವರು ಸಚಿವರಾಗುತ್ತಿರುವುದು ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವಾರು ನೂತನ ಸಚಿವರು ರೈತರ ಮಕ್ಕಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು ಎಂಬುದು ಗಮರ್ನಾಹ. ರಾಜ್ಯಸಭೆಯಲ್ಲೂ ಪ್ರಧಾನಿಗೆ ನೂತನ ಸಚಿವರನ್ನು ಪರಿಚಯಿಸಲು ಸಾಧ್ಯವಾಗಿಲ್ಲ. ವಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದು ವಿವಿಧ ವಿಷಯಗಳ ಬಗ್ಗೆ ಪ್ರತಿಭಟನೆ ನಡೆಸಿದ್ದರು.

‘ಗ್ರಾಮೀಣ ಭಾರತದ ಜನರು, ಸಾಮಾನ್ಯ ಕುಟುಂಬಗಳಿಂದ ಬಂದವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆದರೆ ಕೆಲವರು ಸಚಿವರನ್ನು ಪರಿಚಯಿಸುವುದನ್ನು ಬಯಸುವುದಿಲ್ಲ. ಮಹಿಳೆಯರನ್ನು ಬಯಸುವುದಿಲ್ಲ. ಅವರಿಗೆ ಮಹಿಳಾ ವಿರೋಧಿ ಮನೋಭಾವವೂ ಇದೆ. ಸಂಸತ್ತಿನಲ್ಲಿ ಇಂತಹ ನಕಾರಾತ್ಮಕ ಮನಸ್ಥಿತಿ ಕಂಡಿಲ್ಲ ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದರು.

ಮುಂಗಾರು ಅಧಿವೇಶನ ಪ್ರಾರಂಭವಾಗುವ ಮುನ್ನ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ತೀಕ್ಷ್ಣವಾದ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕು. ಅವುಗಳಿಗೆ ಸೌಹಾರ್ದಯುತ ವಾತಾವರಣದಲ್ಲಿ ಅವರಿಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೂ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದರು.

ಕೋವಿಡ್ 2ನೇ ಅಲೆ ನಿಭಾಯಿಸುವುದು, ಇಂಧನ ಬೆಲೆಗಳ ಏರಿಕೆ, ರೈತರ ಪ್ರತಿಭಟನೆ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟದ ವರದಿಯನ್ನು ಒಳಗೊಂಡಂತೆ ಹಲವಾರು ವಿಷಯಗಳ ಬಗ್ಗೆ ವಿಪಕ್ಷಗಳು ಪ್ರತಿಭಟನೆ ನಡೆಸಿದವು. ಇಬ್ಬರು ಸಚಿವರು ಸೇರಿದಂತೆ 300ಕ್ಕೂ ಹೆಚ್ಚು ಪರಿಶೀಲಿಸಿದ ಮೊಬೈಲ್ ಫೋನ್ ಸಂಖ್ಯೆಗಳನ್ನು ಇಸ್ರೇಲಿ ಸ್ಪೈವೇರ್ ಮೂಲಕ ಹ್ಯಾಕ್ ಮಾಡಿರುವ ವಿಷಯ ಪ್ರಸ್ತಾಪವಾಯಿತು.

ಇಡೀ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿರುವ ಕೊರೋನಾ ಸಾಂಕ್ರಾಮಿಕ ಕುರಿತು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ಬಯಸುತ್ತೇನೆ ಎಂದು ಮೋದಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!