ಕಾನ್ಪುರದಲ್ಲಿ ರೌಡಿಶೀಟರ್ ಗಳಿಂದ ಗುಂಡಿನ ದಾಳಿ, 8 ಪೊಲೀಸರ ಹತ್ಯೆ
ಕಾನ್ಪುರ: ರೌಡಿ ಶೀಟರ್ ವಿಕಾಸ್ ದುಬೆಯನ್ನು ಪತ್ತೆಹಚ್ಚಲು ಹೋಗಿದ್ದ ಪೊಲೀಸ್ ತಂಡದ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿ ಉಪ ಸಬ್ ಇನ್ಸ್ ಪೆಕ್ಟರ್ ದೇವೇಂದ್ರ ಮಿಶ್ರಾ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಇಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾನ್ಪುರದ ಚೌಬೆಪುರ್ ನ ಬಿತೂರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಇತರ 7 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ದಾಳಿ ಸಮಯದಲ್ಲಿ ಸ್ಥಳದಲ್ಲಿ ಎಎಸ್ ಪಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿದ್ದು, ವಿಧಿ ವಿಜ್ಞಾನ ತಂಡದವರು ಪ್ರದೇಶವನ್ನು ತಪಾಸಣೆ ನಡೆಸುತ್ತಿದ್ದಾರೆ.ಹುತಾತ್ಮ ಪೊಲೀಸ್ ಸಿಬ್ಬಂದಿಯಲ್ಲಿ ಒಬ್ಬರು ಡಿಎಸ್ ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ವರು ಕಾನ್ಸ್ಟೇಬಲ್ ಗಳು ಸೇರಿದ್ದಾರೆ.
ಹುತಾತ್ಮ ಪೊಲೀಸರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್ಒ ಮಹೇಶ್ ಯಾದವ್, ಚೌಕಿ ಉಸ್ತುವಾರಿ ಅನೂಪ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನೆಬುಲಾಲ್, ಕಾನ್ಸ್ಟೇಬಲ್ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಮತ್ತು ಬಬ್ಲು ಎಂದು ಗುರುತಿಸಲಾಗಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವರದಿ ಕೇಳಿದ ಸಿಎಂ ಯೋಗಿ ಆದಿತ್ಯನಾಥ್: ಕಾನ್ಪುರದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಕ್ರಿಮಿನಲ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿರುವ ಅವರು ಘಟನೆ ಬಗ್ಗೆ ಡಿಜಿಪಿ ಹೆಚ್ ಸಿ ಅವಸ್ತಿ ಅವರಲ್ಲಿ ವರದಿ ಕೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಕಾನ್ಪುರ ವಲಯದ ಎಡಿಜಿ ಜೆ ಎನ್ ಸಿಂಗ್, ಕೊಲೆ ಪ್ರಯತ್ನ ಆರೋಪದ ಮೇಲೆ ರೌಡಿಶೀಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಹೋಗಿದ್ದ ವೇಳೆ ಕ್ರಿಮಿನಲ್ ಗಳು ಗುಂಡಿನ ದಾಳಿ ನಡೆಸಿ ಈ ದುರ್ಘಟನೆ ನಡೆದಿದೆ. ಕ್ರಿಮಿನಲ್ ಗಳು ಅವಿತು ಕುಳಿತಿದ್ದರು ಎಂದು ತಿಳಿಸಿದ್ದಾರೆ.
ನಾವು ಶೋಧ ಕಾರ್ಯ ಮುಂದುವರಿಸಿದ್ದು ನೆರೆಯ ಜಿಲ್ಲೆಗಳ ಪೊಲೀಸರ ನೆರವನ್ನು ಸಹ ಕೋರಿದ್ದೇವೆ ಎಂದರು.
ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರತಿಕ್ರಿಯೆ ನೀಡಿ ರೌಡಿ ಶೀಟರ್ ವಿಕಾಸ್ ದುಬೆ ವಿರುದ್ಧ ಸೆಕ್ಷನ್ 307ರಡಿ ಕೇಸು ದಾಖಲಾಗಿತ್ತು. ಹೀಗಾಗಿ ಪೊಲೀಸರು ಮಧ್ಯ ರಾತ್ರಿ ಆತನನ್ನು ಹುಡುಕಿ ಬಂಧಿಸುವ ಕಾರ್ಯಕ್ಕೆ ಹೋಗಿದ್ದರು. ನಮ್ಮ ಪೊಲೀಸರು ಅಲ್ಲಿಗೆ ಹೋದಾಗ ಜೆಸಿಬಿ ನಿಲ್ಲಿಸಿ ಕ್ರಿಮಿನಲ್ ಗಳು ತಡೆದಿದ್ದರು. ಪೊಲೀಸರು ವಾಹನದಿಂದ ಇಳಿದ ತಕ್ಷಣವೇ ಗುಂಡಿನ ದಾಳಿ ನಡೆಸಿ ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದರೂ ಆ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸದೆಬಡಿಯಲು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ.