ತಮಿಳುನಾಡು ಲಾಕಪ್’ಡೆತ್: ಎಸ್ಐ, ಮುಖ್ಯ ಪೇದೆ ಬಂಧನ, 2 ಪೊಲೀಸರ ವಿರುದ್ಧ ಎಫ್ಐಆರ್
ತೂತುಕುಡಿ: ತಮಿಳುನಾಡಿನಲ್ಲಿ ಅಪ್ಪ-ಮಗ ಲಾಕಪ್’ಡೆತ್ ಪ್ರಕರಣ ದೇಶದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ ಸಬ್ ಇನ್ಸ್ ಪೆಕ್ಟರ್ ರಘು ಗಣೇಶ್ ಹಾಗೂ ಮುಖ್ಯ ಪೇದೆ ಮುರುಗನ್ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ. ಅಲ್ಲದೆ, ಎಫ್ಐಆರ್ ನಲ್ಲಿ ಇಬ್ಬರು ಪೊಲೀಸರ ಹೆಸರನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಪಿ.ಜಯರಾಜ್ ಮತ್ತು ಅವರ ಮಗ ಫೆನಿಕ್ಸ್ ಅವರನ್ನು ಲಾಕ್’ಡೌನ್ ವೇಳೆ ತಮ್ಮ ಮೊಬೈಲ್ ಅಂಗಡಿ ತೆರೆದು ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಪೊಲೀಸರು ಆರೋಪಿಸಿ ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಪೊಲೀಸರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪರಿಣಾಮ ಘಟನೆ ನಡೆದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ಘಟನೆಗೆ ರಾಷ್ಟ್ರವ್ಯಾಪ್ತಿ ತೀವ್ರ ವಿರೋಧಗಳು ವ್ಯಕ್ತವಾಗಲು ಆರಂಭಿಸಿತ್ತು.
ಬಳಿಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ತಮಿಳುನಾಡು ಸರ್ಕಾರ ಸಿಬಿ-ಸಿಐಡಿ ತನಿಖೆಗೆ ವಹಿಸಿತ್ತು. ಇದರಂತೆ ತನಿಖಾಧಿಕಾರಿಗಳು ಬುಧವಾರ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇದರಂತೆ ಕಳೆದ ರಾತ್ರಿ ಎಸ್ಐ ಹಾಗೂ ಮುಖ್ಯ ಪೇದೆಯನ್ನು ಬಂಧನಕ್ಕೊಳಪಡಿಸಿದ್ದಾರೆ. ಇನ್ನು ಮತ್ತೊಬ್ಬ ಎಸ್ಐ ಬಾಲಕೃಷ್ಣ ಹಾಗೂ ಪೇದೆ ಮುತ್ತುರಾಜ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ಎಸ್ಐ ಬಾಲಕೃಷ್ಣ ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಬಂಧನಕ್ಕೊಳಗಾಗಿರುವ ಗಣೇಶ್ ಅವರನ್ನು ಇಂದು ಬೆಳಿಗಿನ ಜಾವ ತೂತುಕುಡಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಸ್ ಹೇಮಾ ಅವರ ಮುಂದೆ ಹಾಜರುಪಡಿಸಲಾಗಿದ್ದು, ತೂತುಕುಡಿ ಸರ್ಕಾರಿ ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿ ನೀಡಿದ ಬಳಿಕ ಸಿಜೆಎಂ ಗಣೇಶ್ ಅವರನ್ನು ಜುಲೈ 14 ರವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದೀಗ ಗಣೇಶ್ ಅವರನ್ನು ಪೆರುರಾಣಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.