ಡಿಕೆಶಿ ಪದಗ್ರಹಣಕ್ಕೆ ಕ್ಷಣಗಣನೆ: ಉಡುಪಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದ ಉತ್ಸಾಹ
ಉಡುಪಿ: (ಉಡುಪಿ ಟೈಮ್ಸ್ ವರದಿ) ಉಡುಪಿ ಜಿಲ್ಲೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದೀಗ ಮಂದಹಾಸ ಮೂಡುತ್ತಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಪ್ರಭಾವಿ ನಾಯಕ, ಚಾಣಾಕ್ಷ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡುತ್ತಿದ್ದಂತೆ, ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಮತ್ತು ವಿಶೇಷವಾಗಿ ಕಾರ್ಯಕರ್ತರಲ್ಲಿ ನವ ಉತ್ಸಾಹ ತುಂಬಿದೆ. ಸೋಷಿಯಲ್ ಮಾಧ್ಯಮ ಬಳಕೆಯಲ್ಲಿ ಹಿಂದೆ ಇದ್ದ ಪಕ್ಷ ಇದರಿಂದ ಹಲವಾರು ಬಾರಿ ಚುನಾವಣೆಗಳಲ್ಲಿ ಸೋಲನ್ನು ಕಂಡುಕೊಂಡಿತ್ತು. ಆದರೆ ಈ ಬಾರಿ ತಪ್ಪನ್ನು ತಿದ್ದಿಕೊಂಡಿರುವ ರಾಜ್ಯ ಕಾಂಗ್ರೆಸ್ ಅದರಲ್ಲೂ ಚಾಣಾಕ್ಷ ರಾಜಕಾರಣಿ ಡಿಕೆ ಶಿವಕುಮಾರ್ ಮತ್ತು ತಂಡ, ಸೋಷಲ್ ಮಾಧ್ಯಮದ ಮೂಲಕ ಡಿಜಿಟಲ್ ವ್ಯವಸ್ಥೆಗಳ ಸಹಾಯದೊಂದಿಗೆ ರಾಜ್ಯದ 7800 ಕಡೆಗಳಲ್ಲಿ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಿದೆ.
ಪದಗ್ರಹಣ ಕಾರ್ಯಕ್ರಮ ಮೂರು ಬಾರಿ ಮುಂದೂಡಲ್ಪಟ್ಟರೂ, ಸರಕಾರ ಇದೀಗ ಅವಕಾಶ ನೀಡಿದೆ. ಕಳೆದ ಹಲವು ದಿನಗಳಂತೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಪದಗ್ರಹಣದ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವುದು ಉಡುಪಿ ಜಿಲ್ಲೆಯಾದ್ಯಂತ ಕಂಡುಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವದ ಕೊರತೆಯಿಂದ ಐದು ವಿಧಾನಸಭಾ ಕ್ಷೇತ್ರಗಳನ್ನು ಕಳಕೊಂಡಿರುವ ಕಾಂಗ್ರೆಸ್, ಜಿಲ್ಲಾ, ತಾಲೂಕು ಪಂಚಾಯತ್ ಬಹುತೇಕ ಸ್ಥಾನಗಳನ್ನು ಕೂಡ ಕಳೆದುಕೊಂಡಿತ್ತು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಕೊಟ್ಟಿದ್ದು ಗ್ರಾಮ ಪಂಚಾಯತ್ಗಳು ಮಾತ್ರ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿದ್ದರಿಂದ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಕೊನೆಯ ಕ್ಷಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪರ್ಧೆ ಮಾಡಿದ್ದಾದರೂ, ಪ್ರಧಾನಿ ನರೇಂದ್ರ ಮೋದಿ ಹವಾದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. ರಾಜ್ಯದಲ್ಲಿ ಕೇವಲ ಒಂದು ಸಂಸದರನ್ನು ಮಾತ್ರ ಗೆಲ್ಲಿಸಿಕೊಡಲು ಶಕ್ತರಾಗಿದ್ದ, ಕಾಂಗ್ರೆಸ್ ಉಡುಪಿ ಜಿಲ್ಲೆಯಲ್ಲಿ ಬಹುತೇಕ ಶರಣಾಗಿತ್ತು.
ಕೆಲವು ತಿಂಗಳುಗಳ ಹಿಂದೆಯಷ್ಟೇ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಕುಮಾರ್ ಕೊಡವೂರು, ಮರಳಿ ಕಾಂಗ್ರೆಸ್ ಪಕ್ಷದ ಗತ ವೈಭವವನ್ನು ಮರಳಿ ತರುವಲ್ಲಿ ಪ್ರಯತ್ನ ಪಟ್ಟರಾದರೂ, ಒಗ್ಗಟ್ಟಿನ ಕೊರತೆ ಮತ್ತು ಕಾರ್ಯಕರ್ತರಲ್ಲಿ ಇಲ್ಲದ ಉತ್ಸಾಹ ಇವರ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟಿತ್ತು. ಉಡುಪಿ ಜಿಲ್ಲೆಯ ಪ್ರಭಾವಿ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ನಾಯಕತ್ವ ಇದೆಯಾದರೂ, ಸದ್ಯ ಇವರನ್ನು ಅನಾರೋಗ್ಯ ಕಾಡುತ್ತಿದೆ. ಇವೆಲ್ಲದರ ನಡುವೆ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಯುಆರ್ ಸಭಾಪತಿಯಂತಹ ಪ್ರಭಾವಿ ನಾಯಕರು ಇದ್ದರಾದರೂ, ಇವರೆಲ್ಲರ ನಡುವೆ ಒಗ್ಗಟ್ಟಿನ ಕೊರತೆ ಇರುವುದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದರು.
ರಾಜ್ಯ ಕಾಂಗ್ರೆಸ್ನಲ್ಲಿ ಬದಲಾದ ನಾಯಕತ್ವದಿಂದ ಉಡುಪಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಉಡುಪಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹಲವಾರು ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ಕಂಡಾಗ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗತ ವೈಭವನ್ನು ನೆನಪಿಸುವಂತಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಯಶಸ್ವಿಗಾಗಿ ಕೆಪಿಸಿಸಿಯ ನೂತನ ಅಧ್ಯಕ್ಷರ ಸೂಚನೆಯಂತೆ ಜಿಲ್ಲೆಯ ಎಲ್ಲ ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಪೂರ್ವಭಾವಿ ಸಭೆಗಳು ನಡೆದಿದ್ದು, ಕೋರೊನ ಮಹಾಮಾರಿಯ ನಡುವೆಯೂ ಹಿರಿಯರಲ್ಲದೆ ಯುವಕರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಕಂಡು ಬಂದಿತ್ತು.
ಜಿಲ್ಲೆಯ ಪ್ರಮುಖ ಎಲ್ಲ ನಾಯಕರುಗಳನ್ನು ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು, ಪಾದರಸದಂತೆ ಸಂಚರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನ ಮಾಡುತ್ತಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರನ್ನು “ಉಡುಪಿ ಟೈಮ್ಸ್” ಸಂಪರ್ಕಿಸಿದಾಗ, 170ಕ್ಕೂ ಅಧಿಕ ಸ್ಥಳಗಳಲ್ಲಿ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರವನ್ನು ನಡೆಸಲು ಸಿದ್ಧತೆ ಮಾಡಲಾಗಿದೆ. ಡಿಕೆಶಿ ಪದಗ್ರಹಣದ ನಿಮಿತ್ತ ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತಿದ್ದು, ಹಿರಿಯರ ಜೊತೆಗೂಡಿ ಪದಗ್ರಹಣ ಕಾರ್ಯಕ್ರಮವನ್ನು ತಮ್ಮ ತಮ್ಮ ಊರುಗಳಲ್ಲಿ ಯಶಸ್ವಿಯಾಗಿ ನಡೆಸಲು ಉತ್ಸಾಹದಿಂದ ಕೆಲಸವನ್ನು ಮಾಡುತ್ತಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಯುವಕ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ವಿವಿಧ ಘಟಕಗಳು ಸೋಷಿಯಲ್ ಮತ್ತು ಡಿಜಿಟಲ್ ತಂಡಗಳು ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಹಲವಾರು ಬಾರಿ ಸಭೆಯನ್ನು ನಡೆಸಿ ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಆಕರ್ಷಿಸುವಲ್ಲಿ ಪ್ರಯತ್ನ ಮಾಡುತ್ತಿವೆ.
ಇವೆಲ್ಲವನ್ನು ಕಂಡಾಗ ಉಡುಪಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಡಿಕೆಶಿ ಪದಗ್ರಹಣದ ನಿಮಿತ್ತ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಕಾಂಗ್ರೆಸ್ ಕಚೇರಿಗಳು ಮದುಮಗಳಂತೆ ಶೃಂಗಾರಗೊಂಡಿದ್ದು, ಶುಭ ಕೋರುವ ಬ್ಯಾನರ್ಗಳು, ಬಂಟಿಂಗ್ಸ್ ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿವೆ. ಉಡುಪಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಚೇರಿ ಮತ್ತು ನೇರಪ್ರಸಾರ ನಡೆಯುವ ಸ್ಥಳಗಳಲ್ಲಿ ಬಹುತೇಕ ಎಲ್ಲ ಸಿದ್ಧತೆಗಳು ಕೊನೆಗೊಂಡಿದ್ದು, ರಾಜ್ಯ ಸರಕಾರದ ನಿಯಮಗಳನ್ನು ಪಾಲಿಸಲು ಕೆಪಿಸಿಸಿ ಸೂಚನೆಯನ್ನು ನೀಡಿದೆ. ಜುಲೈ 2 ರಂದು ಬೆಳಿಗ್ಗೆ 10.30 ಕ್ಕೆಕಾರ್ಯಕ್ರಮ ಆರಂಭಗೊಳ್ಳಲಿದೆ.