ಎರಡು ದಿನ ಬಿಸಿಲಿಗೆ ಮೈಯೊಡ್ಡದಂತೆ ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ಇದೇ 21 ಮತ್ತು 22ರಂದು ಗರಿಷ್ಠ 43 ಡಿಗ್ರಿ ಸೆಲ್ಸಿಯಸ್‍ವರೆಗೆ ತಾಪಮಾನ ಏರುವ ಸಾಧ್ಯತೆ ಇದೆ. ಈ ಎರಡೂ ದಿನಗಳ ಕಾಲ ಬೆಳಿಗ್ಗೆ 11:30ರಿಂದ ಮಧ್ಯಾಹ್ನ 3:30 ರವರೆಗೆ ರೈತರು ಹಾಗೂ ಜನರು ಬಿಸಿಲಿಗೆ ಮೈಯೊಡ್ಡದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ವೈಪರೀತ್ಯದಿಂದ ರಾಜ್ಯದ ಕೆಲವೆಡೆ ಐದು ದಿನದಿಂದ ಭಾರಿ ಮಳೆಯಾಗಿದ್ದು, ತಾಪಮಾನ ಏರಿಕೆಗೂ ಇದೇ ಕಾರಣ ಎನ್ನಲಾಗಿದೆ. ಕಲಬುರ್ಗಿಯಲ್ಲಿ ಬುಧವಾರ 41.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 39, ಬೀದರ್, ವಿಜಯಪುರದಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜ್ಯದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳವರೆಗೆ ಗುಡುಗು, ಸಿಡಿಲು ಹೆಚ್ಚಾಗಿರಲಿದೆ. ಉತ್ತರ ಒಳನಾಡು ಹಾಗೂ ಉಳಿದ ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ.