ಕೊರೊನಾ ನಿಷ್ಕ್ರಿಯಕ್ಕೆ ಹೊಸ ವಿಧಾನ: ವಿಜ್ಞಾನಿಗಳ ಸಂಶೋಧನೆ
ವಾಷಿಂಗ್ಟನ್: ಕೋವಿಡ್- 19ಕ್ಕೆ ಕಾರಣವಾಗುವ ಸಾರ್ಸ್ ಕೋವ್-2ನಂತಹ ಕೊರೊನಾ ವೈರಾಣು ಸೋಂಕಿನ ವಿರುದ್ಧ ಚಿಕಿತ್ಸೆಗೆ ಬಳಸಬಹುದಾದ ಔಷಧ ವಿಧಾನವೊಂದನ್ನು ಅಮೆರಿಕದ ವಿಜ್ಞಾನಿಗಳು ಗುರುತಿಸಿದ್ದಾರೆ. ಭವಿಷ್ಯದಲ್ಲಿ ಬರುವ ಕೊರೊನಾ ವೈರಾಣುಗಳನ್ನೂ ಈ ಔಷಧ ವಿಧಾನದಿಂದ ತಡೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಮೆರಿಕದ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಫಿನ್ಬೆರ್ಗ್ ಸ್ಕೂಲ್ ಆಫ್ ಮೆಡಿಸಿನ್ನ ವಿಜ್ಞಾನಿಗಳು ನಡೆಸಿರುವ ಈ ಅಧ್ಯಯನ ವರದಿ ಪ್ರಕಟವಾಗಿದೆ. ಸಾರ್ಸ್ ಕೋವ್-2 ಕೊರೊನಾ ವೈರಾಣುವಿನ ಎನ್ಎಸ್ಪಿ16 ಎಂಬ ಪ್ರೊಟೀನ್ ಮೇಲೆ ಅಧ್ಯಯನ ನಡೆಸಿ, ಈ ಔಷಧ ವಿಧಾನವನ್ನು ರೂಪಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಎನ್ಎಸ್ಪಿ16 ಎಂಬ ಪ್ರೊಟೀನ್ ಬಹುತೇಕ ಎಲ್ಲಾ ಕೊರೊನಾವೈರಾಣುಗಳಲ್ಲೂ ಇರುತ್ತದೆ. ಸಾರ್ಸ್ಕೋವ್-2ನಲ್ಲೂ ಇದೆ. ಎಲ್ಲಾ ಕೊರೊನಾವೈರಾಣುಗಳಲ್ಲಿ ಈ ಪ್ರೊಟೀನ್ನ ರಚನೆ ಒಂದೇ ಸ್ವರೂಪದಲ್ಲಿ ಇದೆ. ಮನುಷ್ಯನ ದೇಹ ಸೇರಿದ ನಂತರ ವೈರಾಣುಗಳ ಸಂಖ್ಯೆ ಹೆಚ್ಚಾಗಲು ಈ ಪ್ರೊಟೀನ್ ನೆರವಾಗುತ್ತದೆ. ಈ ಪ್ರೊಟೀನ್ನ ವಂಶವಾಹಿಯ 3 ಆಯಾಮದ ಚಿತ್ರದ ಅಧ್ಯಯನ ನಡೆಸಿದ್ದೇವೆ. ಪ್ರೊಟೀನ್ನಲ್ಲಿನ ಒಂದು ಅಯಾನ್ ಕಣವು, ವೈರಾಣುಗಳ ಸಂಖ್ಯೆ ಹೆಚ್ಚಳವನ್ನು ಉದ್ದೀಪಿಸುತ್ತದೆ. ಈ ಕಣವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿದೆ. ನಿಷ್ಕ್ರಿಯಗೊಳಿಸಿದರೆ ವೈರಾಣುಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯಬಹುದು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.”