ಪ್ರತಿಜ್ಞಾ ಕಾರ್ಯಕ್ರಮಕ್ಕೆ ಸಿಎಂ ಅನುಮತಿ, ಪೊಲೀಸರು ಅಡಚಣೆ ಮಾಡುವಂತಿಲ್ಲ: ಡಿಕೆಶಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ-ಪ್ರತಿಜ್ಞಾಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಮತಿ ನೀಡಿದ್ದು, ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಕರೆಗಳು ಬಂದಿವೆ. ಮುಖ್ಯಮಂತ್ರಿಗಳೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅನುಮತಿ ಕೊಟ್ಟಿದ್ದಾರೆ. ತಾವು ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನೀವಿರುವ ಪ್ರದೇಶಗಳಲ್ಲೇ ಇದ್ದು ಸುದ್ದಿವಾಹಿನಿಗಳಲ್ಲಿ ಬರುವ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಬೇಕು. ತಾವು ಆಮಂತ್ರಣ ನೀಡಿರುವವರನ್ನು ಬಿಟ್ಟು ಬೇರೆ ಯಾರು ಕೂಡ ಇಲ್ಲಿಗೆ ಬರಬಾರದು. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಟಿವಿ ಹಾಗೂ ಜೂಮ್ ಮೂಲಕ ನೀವಿರುವ ಪ್ರದೇಶಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಾವೆಲ್ಲಾ ಸಹಕಾರ ನೀಡಬೇಕು. ಕಾರ್ಯಕರ್ತರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಎಲ್ಲ ಮಠ ಹಾಗೂ ಸಮುದಾಯದ ಗುರು ಹಿರಿಯರು ಆಶೀರ್ವಾದ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಜನರು ಕೂಡ ನಾವು ನೀಡಿರುವ ಸಂಖ್ಯೆಗೆ ಮಿಸ್ ಕಾಲ್ ನೀಡಿ ಆ ಮೂಲಕ ಆಶೀರ್ವಾದ ನೀಡಬಹುದು. ಇಲ್ಲಿಗೆ ಬರುವವರಿಗೆ ಪಾಸ್ ನೀಡಿದ್ದು, ಖುದ್ದು ತಮ್ಮ ಮನೆಯಿಂದ ಇಬ್ಬರು ಮಾತ್ರ ಬರುತ್ತಿದ್ದೇವೆ. ಕೆಲವು ನಾಯಕರು, ಹೊರ ರಾಜ್ಯದಿಂದ ನಾಲ್ಕೈದು ಜನ ಹಾಗೂ ಮಾಧ್ಯಮದವರಿಗೆ ಮಾತ್ರ ಈ ಪಾಸ್ ನೀಡಲಾಗಿದೆ. ಅವರು ಮಾತ್ರ ಇಲ್ಲಿಗೆ ಬರಲು ಅವಕಾಶವಿದೆ. ಹೀಗಾಗಿ ಹೆಚ್ಚಿನ ಜನ ಸೇರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.