ರಾಫೆಲ್ ಒಪ್ಪಂದದ ತನಿಖೆಯನ್ನು ಜೆಪಿಸಿಗೆ ವಹಿಸದೆ ಸರ್ಕಾರಕ್ಕೆ ಬೇರೆ ಆಯ್ಕೆಯೇ ಇಲ್ಲ: ಕಾಂಗ್ರೆಸ್
ನವದೆಹಲಿ: ರಾಫೆಲ್ ಒಪ್ಪಂದದ ತನಿಖೆಯನ್ನು ಜೆಪಿಸಿಗೆ ವಹಿಸದೇ ಸರ್ಕಾರಕ್ಕೆ ಬೇರೆ ಆಯ್ಕೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ರಾಫೆಲ್ ಜೆಟ್ ಖರೀದಿಯಲ್ಲಿನ ಅಕ್ರಮದ ಬಗ್ಗೆ ಫ್ರಾನ್ಸ್ ನಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿ 48 ಗಂಟೆಗಳೇ ಕಳೆದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.
‘ಸತ್ಯವನ್ನು ಮೌನವಾಗಿಸುವುದಕ್ಕೆ ಸಾಧ್ಯವಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದರೆ, ಮಾಜಿ ರಕ್ಷಣಾ ಸಚಿವ ಎ.ಕೆ ಆಂಟೊನಿ ಪ್ರಧಾನಿ ನರೇಂದ್ರ ಮೋದಿ ರಾಫೆಲ್ ಒಪ್ಪಂದ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಫ್ರೆಂಚ್ ಮೀಡಿಯಾದ ಪತ್ರಕರ್ತರೊಬ್ಬರ ವಿಡಿಯೋ ಹಂಚಿಕೊಂಡಿದ್ದು, “ಡಸಾಲ್ಟ್ ಗೆ ಪಾಲುದಾರ ಸಂಸ್ಥೆಯಾಗಿ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ ನ್ನು ಭಾರತ ಸರ್ಕಾರವೇ ಪ್ರಸ್ತಾಪಿಸಿತ್ತು” ಎಂದು ಅಂದಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿದ್ದನ್ನು ಉಲ್ಲೇಖಿಸಿದ್ದರು.
“ಫ್ರೆಂಚ್ ನ್ಯಾಯಾಂಗ ತನಿಖೆಗೆ ಆದೇಶಿಸಿದ ನಂತರ ರಾಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವುದು ಈಗ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬೆಳವಣಿಗೆಗಳ ಕುರಿತು ಸರ್ಕಾರ ಮೌನ ವಹಿಸುತ್ತಿರುವುದು ಭ್ರಷ್ಟಾಚಾರವನ್ನು ಮುಚ್ಚಿಹಾಕುವುದನ್ನು ಸೂಚಿಸುತ್ತಿದ್ದರೆ, ಭ್ರಷ್ಟಾಚಾರದ ಕುರಿತು ತನಿಖೆಗೆ ಆದೇಶಿಸಲು ನಿರಾಕರಿಸುತ್ತಿರುವುದು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸದೇ ಇರುವುದು ಮತ್ತೊಂದು ಅಚ್ಚರಿ” ಎಂದು ಆಂಟೊನಿ ಹೇಳಿದ್ದಾರೆ.