ಉಡುಪಿ: ಡಿಕೆಶಿ ಪದಗ್ರಹಣ 176 ಕಡೆ ನೇರ ಪ್ರಸಾರ
ಉಡುಪಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜುಲೈ 2ರಂದು ಬೆಳಿಗ್ಗೆ 10.30ಕ್ಕೆ ಅಧಿಕಾರ ಸ್ವೀಕರಿಸಲಿದ್ದು, ಜಿಲ್ಲೆಯಲ್ಲಿ 176 ಕಡೆಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 7831 ಕಡೆ ಅಧಿಕಾರ ಸ್ವೀಕಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕಡೆಗಳಲ್ಲಿ 50 ಮಂದಿ ಸೇರಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದ್ದಾರೆ. ಸಂವಿಧಾನದ ಪೀಠಿಕೆ ಓದು, ವಂದೇ ಮಾತರಂ ಗೀತೆ ಯೊಂದಿಗೆ ಪ್ರಾಂಭವಾಗಲಿದೆ ಎಂದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಪದಗ್ರಹಣ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಪಕ್ಷ ಸಂಘಟನೆಗೆ ಪ್ರತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ ಎಂದರು.
ಸಾಮಾಜಿಕ ಜಾಲತಾಣ, ವೆಬ್, ಟಿವಿ ಮಾಧ್ಯಮಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಇರಲಿದ್ದು 1 ಕೋಟಿ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಹದಗೆಟ್ಟಿದೆ. ತೈಲ ಬೆಲೆ ಗಗನಕ್ಕೇರಿದೆ. ಎಪಿಎಂಸಿ ವ್ಯವಸ್ಥೆ ಬುಡಮೇಲಾಗುತ್ತಿದೆ ಎಂದು ಆರೋಪಿಸಿದರು.