ಮೋದಿ ಮಾತು ಬಾಯಿಬಿಟ್ಟರೆ ಬಣ್ಣಗೇಡು; ಕೈಲಾಗದ ನಾಯಕನ ಗೋಳಾಟ; ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು “ಬಾಯಿ ಬಿಟ್ಟರೆ ಬಣ್ಣಗೇಡು” ಎಂಬಂತಾಗಿದೆ ಎಂದು ಟೀಕಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಕ್ಕೀಡಾಗಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವುದೇ ನಿರ್ದಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತೆ ಎಂದು ಅಪಹಾಸ್ಯ ಮಾಡಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಮೋದಿ, ಅದರ ಖರ್ಚು-ವೆಚ್ಚದ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಭಾಷಣದಲ್ಲಿ ಪ್ರಧಾನ ಸ್ಪಷ್ಟೀಕರಣವನ್ನೂ ಸಹ ನೀಡಿಲ್ಲವೆಂದು ಕುಟುಕಿದ್ದಾರೆ.
ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ಮಾತಿಗೆ ಪ್ರತಿಕ್ರಯಿಸಿರುವ ಸಿದ್ದರಾಮಯ್ಯ “ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದ್ದು, ಆಹಾರಧಾನ್ಯ,ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಪ್ರಧಾನಿಗಳು ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು.” ಎಂದಿದ್ದಾರೆ.
ಅಲ್ಲದೆ” ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ದು:ಖತಪ್ತ ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು.” ಎಂದಿದ್ದಾರೆ.
“ಕೊರೊನಾ ಸೋಂಕಿನ ತೀವ್ರತೆ ನೋಡಿದರೆ ಇದು 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ದೇಶದಲ್ಲಿ ಹಸಿವಿನ ಸಮಸ್ಯೆ ಇನ್ನಷ್ಟು ಭೀಕರವಾಗಲಿದೆ.
ಆದ್ದರಿಂದ ನಾವು ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕೆಂದು ಪ್ರಧಾನಿಗಳು್ ಅವರನ್ನು ಒತ್ತಾಯಿಸುತ್ತೇನೆ.
“ಆಸ್ಪತ್ರೆಗಳು ತುಂಬಿಹೋಗಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ಗಳ ತೀವ್ರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದಾಗಿ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಎಂದೂ ಹೇಳಿದ್ದಾರೆ.
ಇನ್ನು ಬಡವರಿಗೆ ಉಚಿತ ಅಕ್ಕಿ, ಗೋಧಿ ನೀಡುವ ಮೋದಿ ತೀರ್ಮಾನಕ್ಕೆ ಸ್ವಾಗತಿಸಿರುವ ಸಿದ್ದರಾಮಯ್ಯ “ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.” ಎಂದಿದ್ದಾರೆ.