ಇಬ್ಬರು ಬಸ್ ಚಾಲಕ, ಹೆಜಮಾಡಿ ಬಟ್ಟೆ ಅಂಗಡಿ ಮಾಲಕ ಸಹಿತ 9 ಮಂದಿಗೆ ಪಾಸಿಟಿವ್
ಉಡುಪಿ: ಇಂದು ಕೊರೋನಾ ಪಾಸಿಟಿವ್ ಬಂದ 9 ಮಂದಿಯಲ್ಲಿ ಮುಂಬೈಯಿಂದ ಬಂದ ಒಂದು ಕುಟುಂಬ ಅಲ್ಲದೆ, ತೆಲಂಗಾಣ ಒಬ್ಬರು, ಬೆಂಗಳೂರಿನಿಂದ ಬಂದ ಇಬ್ಬರು ಹಾಗೂ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಸಂಪರ್ಕಿತ 3 ಮಂದಿ ಸೇರಿದ್ದಾರೆ. ಉಡುಪಿ ತಾಲೂಕಿನ ಇಬ್ಬರು ಹಾಗೂ ಕುಂದಾಪುರ 7 ಮಂದಿ ಇದರಲ್ಲಿ ಸೇರಿದ್ದಾರೆ. ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಿಗೆ ಸೋಂಕು ತಗಲಿದೆ. ಬಸ್ ಚಾಲಕರಿಬ್ಬರಿಗೆ ಪಾಸಿಟಿವ್: ಜಿಲ್ಲೆಯ ಮಟ್ಟಿಗೆ ಆತಂಕವನ್ನುಂಟು ಮಾಡುವ ವಿಷಯವೆಂದರೆ ಕುಂದಾಪುರದ ಇಬ್ಬರು ಖಾಸಗಿ ಬಸ್ಗಳ ಚಾಲಕರಿಗೆ ಪಾಸಿಟಿವ್ ಬಂದಿರುವುದು. ಕುಂದಾಪುರ-ಬೆಂಗಳೂರು ನಡುವೆ ಓಡುವ ಬಸ್ನ ಚಾಲಕರಾಗಿರುವ (45,33) ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು. ಬಟ್ಟೆ ಅಂಗಡಿ ಮಾಲಕ: ರಾಜ್ಯ ಆರೋಗ್ಯ ಇಲಾಖೆ ಇಂದಿನ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಸ್ಥಾನ ಪಡೆದವರಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸಂಪರ್ಕಿತ ಮೂವರು ಸೇರಿದ್ದಾರೆ. ಅವರಲ್ಲಿ ಒಬ್ಬರು ಹೆಜಮಾಡಿ ಸಮೀಪದ ಬಟ್ಟೆ ಅಂಗಡಿಯೊಂದರ ಮಾಲಕರು. ಇವರ ಮಗ ಬೆಂಗಳೂರಿಗೆ ತೆರಳಿದ್ದು, ಅವರ ಸಂಪರ್ಕದಿಂದ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ. ಇದೀಗ ಮಗನ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 20 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 246ಕ್ಕೇರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು ಸೇರಿದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 95 ಜನ ಮೃತಪಟ್ಟಿದ್ದರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರಿನಲ್ಲಿ 503 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 947 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಮಂಗಳವಾರ 235 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 7918ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 7074 ಸಕ್ರಿಯ ಪ್ರಕರಣಗಳಿದ್ದು, 271 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 503, ಬಳ್ಳಾರಿಯಲ್ಲಿ 61, ಹಾವೇರಿಯಲ್ಲಿ 49, ದಕ್ಷಿಣ ಕನ್ನಡದಲ್ಲಿ 44, ಉತ್ತರಕನ್ನಡದಲ್ಲಿ 40, ವಿಜಯಪುರದಲ್ಲಿ 39, ಶಿವಮೊಗ್ಗದಲ್ಲಿ 22, ಬೆಂಗಳೂರು ಗ್ರಾಮಾಂತರದಲ್ಲಿ 21, ಬೀದರ್,ಧಾರವಾಡದಲ್ಲಿ ತಲಾ17, ಹಾಸನದಲ್ಲಿ 16, ರಾಯಚೂರು, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರದಲ್ಲಿ ತಲಾ 12, ಚಿಕ್ಕಮಗಳೂರಿನಲ್ಲಿ 10, ಮೈಸೂರು ತಲಾ 9, ಬಾಗಲಕೋಟೆ, ಕೊಡಗಿನಲ್ಲಿ ತಲಾ 4, ಕೋಲಾರ, ಚಿತ್ರದುರ್ಗದಲ್ಲಿ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗದಲ್ಲಿ ತಲಾ 2, ತುಮಕೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ. |