30 ಮಿಲಿಯನ್ ಪೋಸ್ಟ್ ಗಳ ವಿರುದ್ಧ ಫೇಸ್ ಬುಕ್ ಕ್ರಮ- ಟ್ವಿಟರ್ ಮೇಲೆ ಹೆಚ್ಚಿದ ಒತ್ತಡ
ನವದೆಹಲಿ: ಹೊಸ ಐಟಿ ಕಾನೂನುಗಳ ಅನುಸರಣೆಯ ಬಗ್ಗೆ ಫೇಸ್ ಬುಕ್, ಇನ್ಸ್ಟಾಗ್ರಾಮ್, ಕೂ, ಗೂಗಲ್ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಕೇಂದ್ರ ಐಟಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹೊಸ ಐಟಿ ಕಾನೂನಿನ ಪ್ರಕಾರ ಸ್ವಯಂ ಪ್ರೇರಿತವಾಗಿ ತೆಗೆದುಹಾಕಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಸಂಸ್ಥೆಗಳು ಮೊದಲ ಅನುಸರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪಾರದರ್ಶಕತೆಯೆಡೆಗೆ ಇದು ದೊಡ್ದ ಹೆಜ್ಜೆಯಾಗಿದೆ” ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಹೊಸ ಐಟಿ ಕಾಯ್ದೆಯ ಪ್ರಕಾರವಾಗಿ 5 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳು ಪ್ರತಿ ತಿಂಗಳು ಅನುಸರಣೆ ವರದಿಯನ್ನು ಸಲ್ಲಿಸಬೇಕಿದ್ದು, ದೂರು ಸ್ವೀಕರಿಸುವುದು ಹಾಗೂ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಬೇಕಿದೆ. ಈಗ ಗೂಗಲ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಂಸ್ಥೆಗಳು ಈಗ ಕಂಪ್ಲಿಯನ್ಸ್ ವರದಿಯನ್ನು ಸಲ್ಲಿಸಿರುವುದು ಈಗ ಹೊಸ ಐಟಿ ಕಾನೂನು ಪಾಲನೆಗೆ ಮೊಂಡುತನ ಪ್ರದರ್ಶಿಸಿ ಭಾರತ ಸರ್ಕಾರದೊಂದಿಗೆ ಸಂಘರ್ಷ ಎದುರಿಸುತ್ತಿರುವ ಟ್ವಿಟರ್ ಮೇಲೆಯೂ ಒತ್ತಡ ಉಂಟಾಗುವಂತೆ ಮಾಡಲಿದೆ.
ವರದಿಯಲ್ಲಿ ಫೇಸ್ ಬುಕ್ ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಮೇ 15- ಜೂ.15 ವರೆಗೆ 10 ವಿವಿಧ ವಿಭಾಗಗಳಲ್ಲಿ 30 ಮಿಲಿಯನ್ ಕಂಟೆಂಟ್ ಗಳ ಮೇಲೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಫೇಸ್ ಬುಕ್ ಒಡೆತನದ ಇನ್ಸ್ಟಾಗ್ರಾಮ್ ಹೊಸ ಕಾನೂನಿನ ಅಡಿಯಲ್ಲಿ 2 ಮಿಲಿಯನ್ ಕಂಟೆಂಟ್ ಗಳ ಮೇಲೆ 9 ವಿಭಾಗಗಳಲ್ಲಿ ಕ್ರಮ ಕೈಗೊಂಡಿದೆ. ಪೋಸ್ಟ್ ಗಳು, ಫೋಟೋಗಳು, ವಿಡಿಯೋ, ಕಾಮೆಂಟ್ ಗಳು ನಿಯಮ/ಮಾನದಂಡಗಳ ಉಲ್ಲಂಘನೆಗಾಗಿ ಕ್ರಮ ಕೈಗೊಂಡಿರುವ ಕಂಟೆಂಟ್ ನ ವ್ಯಾಪ್ತಿಯಲ್ಲಿ ಬರುತ್ತವೆ.
ಗೂಗಲ್ ಹಾಗೂ ಯೂಟ್ಯೂಬ್ ಸಂಸ್ಥೆಗಳು ಒಂದು ತಿಂಗಳ ಅವಧಿಯಲ್ಲಿ 27,762 ದೂರುಗಳನ್ನು ಸ್ವೀಕರಿಸಿದ್ದು, 59,350 ಕಂಟೆಂಟ್ ನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಗೆ ಪರ್ಯಾಯವಾಗಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಕೂ ಆಪ್ ಪೂರ್ವಭಾವಿಯಾಗಿ 54,235 ಕಂಟೆಂಟ್ ಪೀಸ್ ಗಳನ್ನು ತೆಗೆದುಹಾಕಿದ್ದರೆ, 5,502 ಪೋಸ್ಟ್ ಗಳನ್ನು ಬಳಕೆದಾರರು ಜೂನ್ ತಿಂಗಳ ಅವಧಿಯಲ್ಲಿ ರಿಪೋರ್ಟ್ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.