ರಾಜ್ಯದಲ್ಲಿ ಪಬ್,ಕ್ಲಬ್,ಶಾಲೆ,ಈಜು ಕೊಳ ಬಿಟ್ಟು ಉಳಿದೆಲ್ಲ ಚಟುವಕೆಗಳಿಗೆ ಅನುಮತಿ ಸಾಧ್ಯತೆ?

ಬೆಂಗಳೂರು: ಕೊರೋನಾ 2ನೇ ಅಲೆ ಅಬ್ಬರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.2.5 ಕ್ಕೆ ಕುಸಿದಿದೆ. ಈ ನಡುವೆ, ರಾಜ್ಯ ಸರ್ಕಾರ ವಿಸ್ತರಿಸಿದ್ದ ಲಾಕ್ಡೌನ್ ಜುಲೈ.5 ಕ್ಕೆ ಅಂತ್ಯಗೊಳ್ಳಲಿದ್ದು, ಇಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಅಧಿಕಾರಿಗಳು ಹಾಗೂ ಸಚಿವರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚೆ ನಡೆಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ. ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪಾಸಿಟಿವಿಟಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಎಲ್ಲಾ ವಲಯಗಳಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. 

ನಿಯಮಗಳನ್ನು ಸಡಿಲಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ ನೈಟ್ ಕರ್ಫ್ಯೂವನ್ನು ಮುಂದುವರೆಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ಎರಡು ವಾರಗಳ ಹಿಂದೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ ಪಬ್, ಕ್ಲಬ್’ಗಳು, ಶಾಲೆಗಳು ಹಾಗೂ ಸ್ವಿಮ್ಮಿಂಗ್ ಪೂಲ್ ಗಳ ತೆರೆಯಲು ಈಗಲೇ ಅನುಮತಿ ನೀಡುವುದು ಅನುಮಾನ ವಾಗಿದ್ದು, ವ್ಯವಹಾರ ಚಟುವಟಿಕೆಗಳಿಗೆ ನೀಡಲಾಗಿದ್ದ ಸಂಜೆ 7 ಗಂಟೆವರೆಗಿನ ಅವಧಿ ಇದೀಗ ಸಂಜೆ 7 ಗಂಟೆಯವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ. ಇನ್ನು ನೈಟ್ ಕರ್ಫ್ಯೂ ರಾತ್ರಿ 9ಗಂಟೆಯಿಂದ ಆರಂಭವಾಗಲಿದೆ. ಇನ್ನು ಮಾಲ್ ಹಾಗೂ ಚಿತ್ರಮಂದಿರಗಳ ಮೇಲಿನ ನಿಯಮಗಳು ಸಡಿಲಗೊಳ್ಳಲಿದ್ದು, ರೆಸ್ಟೋರೆಂಟ್, ಸಾರಿಗೆ ಸೇವೆಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. 

ಈ ನಡುವೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಹೀಗಾಗಿ ಆ ರಾಜ್ಯಗಳಿಂದ ಬರುವವರಿಗೆ ರಾಜ್ಯ ಸರ್ಕಾರ ಆರ್’ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ 2 ಡೋಸ್ ಲಸಿಕಾ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ಈ ರಾಜ್ಯಗಳಿಂದ ಬರುವವರಿಗೆ ಹೊರಡಿಸಲಾಗಿರುವ ಮಾರ್ಗಸೂಚಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. 

Leave a Reply

Your email address will not be published. Required fields are marked *

error: Content is protected !!