ಬಳ್ಳಾರಿಯಲ್ಲಿ ಅಮಾನವೀಯ ಶವಸಂಸ್ಕಾರ: ಕ್ಷಮೆಯಾಚಿಸಿದ ಜಿಲ್ಲಾಧಿಕಾರಿ

ಬಳ್ಳಾರಿ: ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್ ನಿಂದ ಎಳೆದು ತಂದು ಒಂದೇ ಗುಂಡಿಗೆ ಎಸೆಯುವ 1 ನಿಮಿಷ 28 ಸೆಕೆಂಡಿನ ವೀಡಿಯೋ ಜಿಲ್ಲೆಗೆ ಸಂಬಂಧಿಸಿದ್ದು, ಈ ಘಟನೆಗಾಗಿ ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಬೇಷರತ್ ಆಗಿ ಕ್ಷಮೆಯಾಚಿಸುತ್ತದೆ ಎಂದು ಜಿಲ್ಲಾಧಿಕಾರಿ‌ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯ ವಾಟ್ಸ್ಯಾಪ್ ಗುಂಪುಗಳಲ್ಲಿ‌ ವೀಡಿಯೊ ಹರಿದಾಡಿದ ಬಳಿಕ ಅವರು ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು.

‘ತನಿಖೆಯಲ್ಲಿ, ವೀಡಿಯೋ ಬಳ್ಳಾರಿಯಲ್ಲಿ ನಡೆದಿದ್ದ ಅಂತ್ಯಸಂಸ್ಕಾರದ್ದೇ ಆಗಿರುವುದು ದೃಢಪಟ್ಟಿದೆ.  ಶವಗಳನ್ನು ಸೋಂಕು ಹರಡದಂತೆ ಸಂಪೂರ್ಣ ಮುಚ್ಚಲಾಗಿತ್ತು. ಆದರೆ ಅವುಗಳನ್ನು ಗುಂಡಿಗೆ ಎಸೆದಿರುವುದು ವಿಷಾದನೀಯ ವರ್ತನೆಯಾಗಿದೆ.‌ಇದನ್ನು ಜಿಲ್ಲಾಡಳಿತ ಖಂಡಿಸುತ್ತದೆ’ ಎಂದಿದ್ದಾರೆ.

‘ಅಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಿದ  ತಂಡವನ್ನು ಬದಲಾಯಿಸಿದ್ದು, ವಿಮ್ಸ್ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ತರಬೇತಿ ಪಡೆದವರನ್ನು ನಿಯೋಜಿಸಲಾಗುವುದು’ ಎಂದಿದ್ದಾರೆ.

ಕೊರೋನಾ ವೈರಸ್ ಸೋಂಕಿತರ ಶವಸಂಸ್ಕಾರವನ್ನು ಅಮಾನವೀಯ ರೀತಿಯಲ್ಲಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!