ಉಡುಪಿ 24 ಕೋಟಿ ರೂ. ಅನುದಾನ ವಾಪಸ್: ಅಧಿಕಾರಿಗಳ ವಿರುದ್ದ ಕ್ರಮಕ್ಕೆ ನಿರ್ಣಯ
ಉಡುಪಿ ಜೂನ್ 30: ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ 2019-20 ರ ಸಾಲಿನಲ್ಲಿ,
ಪಂಚಾಯತ್ ರಾಜ್ ಇಂಜಿನಿಯರಿ0ಗ್ ವಿಭಾಗದಿಂದ ಸುಮಾರು 24 ಕೋಟಿ ರೂ ಮೊತ್ತದ ಅನುದಾನ ಬಳಕೆಯಾಗದೇ ವಾಪಸ್ ಹೋಗಿದ್ದು, ಈ ಕುರಿತಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು, ಅವರ ಮೇಲಾಧಿಕಾರಿಗಳಿಗೆ ಕೂಡಲೇ ನಿರ್ಣಯ ಮಾಡಿ ಕಳುಹಿಸುವಂತೆ , ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ನಡೆದ, ಜಿಲ್ಲಾ
ಪಂಚಾಯತ್ ಸಾಮಾನ್ಯ ಸಭೆಯಲ್ಲಿ , ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
2019-20 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಮೂಲಕ ಕೈಗೊಂಡ ಕಾಮಗಾರಿಗಳಲ್ಲಿ, ಕಾಮಗಾರಿ ಮುಕ್ತಾಯಗೊಂಡು ಬಿಲ್ಲುಗಳು ಸಲ್ಲಿಕೆಯಾಗಿದ್ದರೂ , ಸಹ ಖಜಾನೆಗೆ ಸಲ್ಲಿಸುವಲ್ಲಿ ವಿಳಂಬವಾದ ಹಿನ್ನಲೆಯಲ್ಲಿ ಜಿಲ್ಲಾವಲಯ ಮತ್ತು ರಾಜ್ಯ ವಲಯದ ಒಟ್ಟು 24 ಕೋಟಿ ರೂ ಗಳ ಅನುದಾನ ವಾಪಸ್ ಹೋಗಿದ್ದು, ಈಗಾಗಲೇ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿದಿದ್ದಲ್ಲಿ , ಮುಂದಿನ ದಿನದಲ್ಲಿ ಕಾಮಗಾರಿ ನಿರ್ವಹಿಸಲು ಯಾರು ಮುಂದೆ ಬರುತ್ತಾರೆ, ಆದ್ದರಿಂದ ಅನುದಾನದ ಸಮರ್ಪಕ ಬಳಕೆ ಮಾಡದೇ ಇರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ನಾಳೆಯೇ ನಿರ್ಣಯ ಸಿಧ್ದಪಡಿಸಿ,ಅವರ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಲು ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾ ಪಂಚಾಯತ್ ನ ಎಲ್ಲಾ ಸದಸ್ಯರು ಕೋರಿದರು.
ಈಗಾಗಲೇ ಇದರ ಕುರಿತು ಜಿಲ್ಲಾ ಪಂಚಾಯತ್ ವತಿಯಿಂದ ತನಿಖೆ ನಡೆಸಲು ಸಮಿತಿ ರಚಿಸಿದ್ದು, ಅದರ ವರದಿ ಕೂಡಾ ಶೀಘ್ರದಲ್ಲಿ ದೊರೆಯಲಿದೆ , ನಿರ್ಣಯ ಸಹ ಸಿದ್ದಪಡಿಸಿ ಅವರ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುವುದು ಎಂದು ಸಿಇಓ ಪ್ರೀತಿ ಗೆಹಲೋತ್ ತಿಳಿಸಿದರು. ಸಭೆಯಲ್ಲಿ ಸದಸ್ಯೆ ಶಿಲ್ಪಾ ಜಿ ಸುವರ್ಣ ಮಾತನಾಡಿ, ಮುದರಂಗಡಿ ಗ್ರಾಮ ಪಂಚಾಯತ್ ನಲ್ಲಿ ಜಿಲ್ಲಾ ಪಂಚಾಯತ್ ಅನುಮತಿ ಪಡೆಯದೇ ವಾಣಿಜ್ಯ ಕಟ್ಟಡವನ್ನು ಒಡೆದು ಹಾಕಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.
ಗ್ರಾಮ ಪಂಚಾಯತ್ ನಲ್ಲಿನ ಕಟ್ಟಡ ಒಡೆಯುವ ಸಂದರ್ಭದಲ್ಲಿ ಅಗತ್ಯ ನಿಯಮ ಪಾಲಿಸದೇ ನಿರ್ಲಕ್ಷ ವಹಿಸಿದ್ದಲ್ಲಿ , ಸಂಬoದಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಿಇಓ ತಿಳಿಸಿದರು. ಸದಸ್ಯೆ ಜ್ಯೋತಿ ಹರೀಶ್ ಮಾತನಾಡಿ, ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1100 ಎಕ್ರೆ ಜಮೀನು ಜಾಗ ಇದ್ದು, ಇದರಲ್ಲಿ ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ಜೈನ ಮಠದ ಆಕ್ಷೇಪವಿದ್ದು, ಇದರಲ್ಲಿನ ಸರಕಾರಿ ಜಾಗದ ಕುರಿತು ಜಾಗ ಗುರುತು ಮಾಡಿಕೊಡುವಂತೆ ಹಾಗೂ ಹೆಬ್ರಿ-ಮುನಿಯಾಲು ಮಾರ್ಗದಲ್ಲಿ ಎಕ್ಸ್ಪ್ರೆಸ್ ಲೇನ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತಡೆ ಆಗಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಸೋಮೇಶ್ವರ ಬಳಿಯ ರಸ್ತೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ಅರಣ್ಯ ಇಲಾಖೆಗೆ ಸಂಬoದಪಟ್ಟ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಕುಂದಾಪುರ ವಲಯ ಅರಣ್ಯಾಧಿಕಾರಿ ಆಶೀಶ್ ರೆಡ್ಡಿ, ಅವುಗಳನ್ನು ಶೀಘ್ರದಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸದಸ್ಯ ಶಶಿಕಾಂತ ಪಡುಬಿದ್ರೆ ಮಾತನಾಡಿ, ಪಡುಬಿದ್ರೆಯಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿ ವಿಳಂಬ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪೂಣಗೊಳ್ಲದೆ ಕಾರಣ ಮಳೆಗಾಲದಲ್ಲಿ ಸಮಸ್ಯೆಯಾಗಿದ್ದು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು, ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.
ಜಿಲ್ಲೆಯಲ್ಲಿನ ಮರಳು ಸಮಸ್ಯೆ ಬಗ್ಗೆ ಸದಸ್ಯ ಜನಾರ್ಧನ ತೋನ್ಸೆಯವರ ಪ್ರಶ್ನೆಗೆ ಉತ್ತರಿಸಿದ , ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ರಾಂಜಿ ನಾಯ್ಕ್, ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಮರಳು ನೀತಿ -2020 ಜಾರಿಗೆ ಬಂದಿದ್ದು, ಆ ಪ್ರಕಾರ ಮರಳು ವಿತರಣೆ ನಡೆಯಲಿದ್ದು, ರಾಜ್ಯದ್ಯಂತ ಏಕರೂಪದ ದರ ನಿಗಧಿಯಾಗಲಿದೆ ಎಂದರು.
ಕೋವಿಡ್ 19 ವಿರುದ್ದ ಹೋರಾಟದಲ್ಲಿ , ಕ್ವಾರಂಟೈನ್ ವ್ಯವಸ್ಥೆ , ಚಿಕಿತ್ಸೆ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಎಲ್ಲಾ
ವ್ಯವಸ್ಥಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್
ಫೆಡ್ನೇಕರ್ ಉಪಸ್ಥಿತರಿದ್ದರು.
24 crore rupees grant went back is a serious issue. That money should have been utilised for development works in the villages of udupi dist. All the members and officials should work for the betterment of the people unitedly with team spirit.