ಕರಾವಳಿಗರ ಬಗ್ಗೆ ದ್ವೇಷದ ಮಾತುಗಳ ಆಡಿಯೋ ಭಾರೀ ವೈರಲ್- ವ್ಯಾಪಕ ಆಕ್ರೋಶ
ಮಂಗಳೂರು, ಜೂ.29: ಕ್ಲಬ್ಹೌಸ್’ನಲ್ಲಿ ಕರಾವಳಿಗರ ಬಗ್ಗೆ ದ್ವೇಷದಿಂದ ಕೂಡಿದ ಮಾತುಗಳ ಮೂಲಕ ನಿಂದನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಕರಾವಳಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕ್ಲಬ್ಹೌಸ್ ಸಾಮಾಜಿಕ ಜಾಲತಾಣದ ‘ಕರುನಾಡು ವರ್ಸಸ್ ತುಳುನಾಡು’ವಿನಲ್ಲಿ ಕರಾವಳಿ ಮತ್ತು ಕರಾವಳಿಗರ ಬಗ್ಗೆ ದ್ವೇಷದ ಮಾತುಗಳನ್ನಾಡಿರುವ ಆಡಿಯೋ ಭಾರೀ ವೈರಲ್ ಆಗಿದೆ. ಈ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶರತ್ ಕುಮಾರ್ ಎಂಬಾತ ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ, ಕರ್ನಾಟಕದ ಇತರ ಭಾಗದವರು ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತಿತರ ದೇವಸ್ಥಾನಕ್ಕೆ ಹೋಗುವು ದನ್ನು ನಿಲ್ಲಿಸುವ ಮೂಲಕ ಮಂಗಳೂರಿಗರ ಸೊಕ್ಕು ಮುರಿಯಬೇಕು. ಕನ್ನಡದ ವಾಹಿನಿಗಳಲ್ಲೂ ಕೂಡ ಕರಾವಾಳಿಗರು ಮೆರೆಯುತ್ತಿದ್ದಾರೆ. ಅವರನ್ನು ಹೊರಗಿಡದಿದ್ದರೆ ಅಂತಹ ಚಾನಲ್ಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳಕ್ಕೆ ಯಾಕೆ ಹೋಗುತ್ತೀರಿ, ನಿಮ್ಮ ಊರಲ್ಲೇ ದೇವಸ್ಥಾನ ಕಟ್ಟಿಸಿ ಎಂದೂ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೆ ಚರ್ಚೆ ವೇಳೆ ಒಬ್ಬಾತ ಕರಾವಳಿಗರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಕೂಡ ವೈರಲ್ ಆಗಿದೆ.