ಬಡವರ, ಕಾರ್ಮಿಕರ, ರೈತರ ಸೌಲಭ್ಯಗಳ ಲೂಟಿಯೇ ಬಿಜೆಪಿಯ ಕಾಳಜಿ- ದೇವರಾಜ್
ಚಿಕ್ಕಮಗಳೂರು, ಜೂ.29: ಶಾಸಕರು ಹಾಗೂ ಬಿಜೆಪಿ ಮುಖಂಡರಿಂದ ಕಟ್ಟಡ ಕಾರ್ಮಿಕರ ಕಿಟ್ ದುರುಪಯೋಗವಾಗಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಷ್ಟ್ ಪಕ್ಷ ಹಾಗೂ ಎಐಟಿಯುಸಿ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಧರಣಿ ನಡೆಯಿತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರಣಿ ಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಬಿಜೆಪಿ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಮುಖಂಡರಿಗೆ ಜನಪರ ಕಾಳಜಿ ಎಂಬುದೇ ಇಲ್ಲ. ಬಡವರು, ಕಾರ್ಮಿಕರು, ರೈತರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಲೂಟಿ ಮಾಡುವುದೇ ಇವರ ಕಾಳಜಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ ಮೂಲಕ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ಪಡಿತರ ಕಿಟ್ಗಳನ್ನು ಪೂರೈಕೆ ಮಾಡಿದೆ. ಆದರೆ ಇಲಾಖೆ ಅಧಿಕಾರಿಗಳು ಈ ಕಿಟ್ಗಳನ್ನು ಫಲಾನುಭವಿಗಳಿಗೆ ಇನ್ನೂ ಹಂಚಿಕೆ ಮಾಡಿಲ್ಲ. ಅಧಿಕಾರಿಗಳ ಮೇಲೆ ಕ್ಷೇತ್ರದ ಶಾಸಕ ರಾಗಿರುವ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು ಒತ್ತಡ ಹೇರಿ ಇಲಾಖೆಯಿಂದ ಪೂರೈಕೆ ಮಾಡಲಾದ ಕಿಟ್ಗಳನ್ನು ನಗರದ ವಿವಿಧ ವಾರ್ಡ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಕಾರ್ಮಿಕ ಇಲಾಖೆಯ ಕಿಟ್ಗಳನ್ನು ಶಾಸಕರ ಸಿ.ಟಿ.ರವಿ ಅವರಿಂದ ವಿತರಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿಯವರು ಇಂತಹ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಮಾತು ಮುಂದುವರೆಸಿದ ಅವರುಕ್ಷೇತ್ರದ ಶಾಸಕರ ಹಾಗೂ ಅವರ ಹಿಂಬಾಲಕರು ನಗರದಲ್ಲಿನ ವಿವಿಧ ರಸ್ತೆಗಳು, ಒಳಚರಂಡಿ, ಅಮೃತ್ಯೋಜನೆ, ಕೆರೆ ಸೇರಿದಂತೆ ವಿವಿಧ ಕಾಮಗಾರಿಗಳ ಅನುದಾನವನ್ನು ಲೂಟಿ ಮಾಡಿಯಾಗಿದೆ. ಈಗ ಕಾರ್ಮಿಕರ ಹಣದಲ್ಲಿ ಕಾರ್ಮಿಕರಿಗೆ ನೀಡಲಾದ ಪಡಿತರ ಕಿಟ್ಗಳನ್ನೂ ಲೂಟಿ ಮಾಡಿ ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಕೂಲಿ ಕಾರ್ಮಿಕರನ್ನು ಈ ಮೂಲಕ ಬಿಜೆಪಿಯವರು ವಂಚಿಸುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಾಗಿ ಆ ಪಕ್ಷದ ಶಾಸಕರು, ಮುಖಂಡರು ಲೂಟಿ ಮಾಡುವ ಯೋಜನೆಗಳನ್ನೇ ಜಾರಿ ಮಾಡುತ್ತಿದೆ. ಸಮಗ್ರ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡದ ಸರಕಾರ ಪಡಿತರ ಕಿಟ್, ಮಾಸ್ಕ್, ಸ್ಯಾನಿಟೈಸರ್ ಕಿಟ್ ಗಳ ಮೂಲಕ ಸರಕಾರದ ಹಣವನ್ನು ಲೂಟಿ ಮಾಡುವ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.
ಧರಣಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಕಾರ್ಮಿಕರ ಕಿಟ್ಗಳು ಬಿಜೆಪಿಯವರ ಪಾಲಾಗುತ್ತಿವೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಿಟ್ಗಳನ್ನು ಮಾರಿಕೊಳ್ಳಲಾಗುತ್ತಿದೆ. ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ನೀಡಿದ ಕಿಟ್ಗಳಿಗೂ ಬಿಜೆಪಿಯವರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಕಿಟ್ಗಳನ್ನು ಅಧಿಕಾರಿಗಳು ಕಾರ್ಮಿಕರಿಗೆ ವಿತರಿಸ ದಿರುವುದರ ಹುನ್ನಾರ ಏನು? ಎಂದು ಪ್ರಶ್ನಿಸಿದ್ದಾರೆ.ಇದೇ ವೇಳೆ ಬಿಜೆಪಿ ಎಂದರೆ ಲೂಟಿಕೋರರ ಪಕ್ಷ ಎಂದ ಅವರು ಮುಂದಿನ ಚುನಾವಣೆಗಳಲ್ಲಿ ಕಾರ್ಮಿಕರು ಇವರಿಗೆ ತಕ್ಕ ಪಾಠ ಕಲಿಸದಿದ್ದಲ್ಲಿ ಇಂತಹ ವಂಚನೆ ನಿರಂತರವಾಗಿರುತ್ತದೆ. ಅಧಿಕಾರಿಗಳೂ ಕೂಡಲೇ ಕಿಟ್ಗಳ ವಿತರಣೆಗೆ ಮುಂದಾಗದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ‘ಕಿಟ್ಗಳ ವಿತರಣೆಗೆ ಕ್ರಮ ವಹಿಸಲಾಗುವುದು, ಧರಣಿ ಕೈಬಿಡುವಂತೆ ಮನವಿ ಮಾಡಿದರು. ಆದರೆ ಅಧಿಕಾರಿಗಳ ಮನವೊಲಿಕೆಗೆ ಮಣಿಯದ ಕಾರ್ಮಿಕರು ಸ್ಥಳದಲ್ಲಿಯೇ ಕಿಟ್ಗಳನ್ನು ವಿತರಿಸದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು 200 ಪಡಿತರಗಳ ಕಿಟ್ ನ್ನು ಸ್ಥಳದಲ್ಲೇ ವಿತರಣೆ ಮಾಡಲು ಕ್ರಮವಹಿಸಿ, ಉಳಿದ ಕಿಟ್ಗಳ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಮುಖಂಡರು ಧರಣಿ ಹಿಂಪಡೆದರು. ಈ ಸಂದರ್ಭ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಘು, ತಾಲೂಕು ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ, ವಸಂತ್ಕುಮಾರ್, ಎಐಟಿಯಿಸಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ , ಜೆಡಿಎಸ್ ಪಕ್ಷದ ಜಯಂತಿ, ಮುಖಂಡರಾದ ಮಂಜೆಗೌಡ, ಶಾಂತಕುಮಾರ್ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.