ಸರಕಾರದ ಹಲವು ರಿಯಾಯಿತಿ ಪಡೆದಿರುವ ಬಸ್ ಮಾಲಕರು ಜನರಿಂದಲೂ ದೋಚಲು ಮುಂದಾಗಿದೆ- ಸಿಪಿಐ(ಎಂ)ಆರೋಪ
ಲಾಕ್ ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಿಟಿ ಬಸ್ ಮತ್ತು ಇತರೆ ಖಾಸಗಿ ಬಸ್ ದರವನ್ನು ಶೇ 25ರಷ್ಟು ಹೆಚ್ಚಿಸುವುದಾಗಿ ಹೇಳಿದ ಖಾಸಗಿ ಬಸ್ಸುಗಳ ಮಾಲಕರ ಸಂಘಗಳ ನಿರ್ಧಾರವನ್ನು ಸಿಪಿಐ(ಎಂ) ತೀವ್ರವಾಗಿ ವಿರೋಧಿಸುತ್ತದೆ.
ಸರಕಾರದೊಂದಿಗೆ ತೆರಿಗೆ ವಿನಾಯತಿ ಸಹಿತ ವಿವಿಧ ರಿಯಾಯತಿಗಳಿಗಾಗಿ ಒತ್ತಡ ಹಾಕಿ ಕೆಲವು ರಿಯಾಯಿತಿಗಳನ್ನು ಪಡೆದಿರುವ ಬಸ್ ಮಾಲಕರು ಜನತೆಯಿಂದಲೂ ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಿಪಿಐ(ಎಂ) ಆಪಾದಿಸಿದೆ. ಈಗಾಗಲೆ ದುಡಿಮೆ ಯಿಲ್ಲದೆ ಬಳಲಿರುವ ಪ್ರಯಾಣಿಕರ ಮೇಲೆ ಹೊರೆ ಹಾಕುವ ಇಂತಹ ಪ್ರಯತ್ನಗಳಿಗೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಲಾಕ್ ಡೌನ್ ನಿರ್ಭಂಧ ಸಡಿಲಿಸಿದ ನಂತರ ಖಾಸಗಿ ಬಸ್ಸು ಮಾಲಕ ಸಂಘಟನೆಗಳು, ಕನಿಷ್ಟ ಅಗತ್ಯಕ್ಕೆ ಅನುಗುಣವಾಗಿ ಬಸ್ಸು ಗಳನ್ನು ಜನರ ಅನುಕೂಲಕ್ಕೆ ತೆರೆದಿಡಲಿಲ್ಲ.ಆಗ ಸರಕಾರಿ ಬಸ್ಸುಗಳು ಮತ್ತು ಒಂದು ಕಂಪನಿಯ ಬಸ್ಸು ಮಾತ್ರ ಜನರ ಸಹಾಯಕ್ಕೆ ಬಂದಿತ್ತು. ಖಾಸಗಿ ಬಸ್ಸುಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕರು ಬಡ ವಿಭಾಗಕ್ಕೆ ಸೇರಿದ ಕೂಲಿಕಾರರು, ಸಣ್ಣ ಪುಟ್ಟ ವರ್ಕ್ ಶಾಪ್, ಅಂಗಡಿ, ಕಚೇರಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತವರು. ಒಂದೊಂದು ಪೈಸೆಗೂ ಲೆಕ್ಕ ಇಟ್ಟು ಬದುಕು ನಡೆಸಬೇಕಾದ ಈ ಧ್ವನಿರಹಿತ ವಿಭಾಗವನ್ನು ಶೇಕಡಾ ಇಪ್ಪತ್ತೈದರಷ್ಟು ಬಸ್ಸು ಪ್ರಯಾಣ ದರ ಏರಿಕೆ ದೊಡ್ಡದಾಗಿ ಭಾದಿಸಲಿದೆ.
ಡೀಸೆಲ್ ದರ ಏರಿಕೆ ಮುಂದಿಟ್ಟು ಅಥವಾ ಇನ್ನಿತರ ಯಾವುದೆ ಕಾರಣಗಳಿಗೂ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅನುಮತಿ ಇಲ್ಲದೆ ಪ್ರಯಾಣ ದರ ಏರಿಕೆಗೆ ನಿಯಮಗಳು ಅನುಮತಿ ನೀಡುವುದಿಲ್ಲ. ಕೊರೋನ ಪ್ರಥಮ ಅಲೆಯ ಸಂದರ್ಭದಲ್ಲೂ ತಾತ್ಕಾಲಿಕ ನೆಲೆಯಲ್ಲಿ ಏರಿಸಿದ್ದ ಪ್ರಯಾಣ ದರವನ್ನು ಬಸ್ಸು ಮಾಲಕರು ನಂತರ ಇಳಿಸಿರಲಿಲ್ಲ. ಈಗ ಮತ್ತೆ ಏಕಪಕ್ಷೀಯ ದರ ಏರಿಕೆ ಸಲ್ಲದು. ಉಡುಪಿ ಜಿಲ್ಲಾ ಬಸ್ ಮಾಲಕರ ಒಂದು ಸಂಘದ ಅಧ್ಯಕ್ಷರು ಹಾಗು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರು, ಆಡಳಿತ ರೂಢ ಪಕ್ಷದ ಜಿಲ್ಲಾ ಅಧ್ಯಕ್ಷರೂ ಆಗಿದ್ದಾರೆ. ಅವರು ತನ್ನದೇ ಸರಕಾರದ ಮೇಲೆ ಪ್ರಭಾವ ಬೀರಲು ವಿಫಲರಾಗಿದ್ದಾರೆ.
ಕಳೆದ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಕಡಿತ ಮಾಡಲಾಗಿತ್ತು. ಅನೇಕರು ಕೆಲಸ ಕಳೆದುಕೊಂಡರು. ಈ ಎಲ್ಲಾ ಹಿನ್ನೆಲೆಯಲ್ಲಿ ದರ ಏರಿಕೆಗೆ ಬಸ್ಸು ಮಾಲಕರು ಮನವಿ ಸಲ್ಲಿಸಿದರೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಅಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲೇ ನಿರ್ಧಾರವನ್ನು ಕೈಗೊಳ್ಳಬೇಕು. ಅದರ ಹೊರತು ಜಿಲ್ಲಾಡಳಿತ ಏಕಪಕ್ಷೀಯ ಏರಿಕೆಗೆ ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತದೆ.
ಬಾಲಕೃಷ್ಣ ಶೆಟ್ಟಿ ಕಾರ್ಯದರ್ಶಿ, ಸಿಪಿಐ(ಎಂ)ಉಡುಪಿ ಜಿಲ್ಲಾ ಸಮಿತಿ