ವಿಮಾನದಿಂದ ಜಿಗಿದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ಭೀತಿ..!?

ಲಾಸ್ ಏಂಜಲೀಸ್: ಕಳೆದ ವಾರ ಟೇಕಾಫ್‌ ಆಗುತ್ತಿದ್ದ ವಿಮಾನದಿಂದ ಜಿಗಿದು ಕಾಲು ಮುರಿದುಕೊಂಡಿದ್ದ ವ್ಯಕ್ತಿ 20 ವರ್ಷ ಜೈಲು ಶಿಕ್ಷೆಯಾಗುವ ಭೀತಿಯಲ್ಲಿದ್ದಾರೆ. ಈ ಕೃತ್ಯ ಎಸಗಿದಾಗ ಆತ ಡ್ರಗ್ಸ್ ಮಿಶ್ರಿತ ಸಿಗರೇಟ್ ಸೇದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಕ್ಸಿಕೊದ ಲಾ ಪಾಜ್‌ನ ಲೂಯಿಸ್ ಆಂಟೋನಿಯೊ ವಿಕ್ಟೋರಿಯಾ ಡೊಮಿಂಗ್ಯೂಜ್ ಅವರು ಶುಕ್ರವಾರ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಾರ್ಮ್ಯಾಕ್‌ ಮೇಲೆ ಹಾರಿ ಕಾಲು ಮುರಿದುಕೊಂಡಿದ್ದಾರೆ ಎಂದು ಲಾಸ್ ಏಂಜಲೀಸ್‌ನ ಅಮೆರಿಕ ವಕೀಲರ ಕಚೇರಿ ತಿಳಿಸಿದೆ.

ಸದ್ಯ, ಆ ವ್ಯಕ್ತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಮಾನದ ಸಿಬ್ಬಂದಿ ಕೆಲಸಕ್ಕೆ ಅಡ್ಡಿಮಾಡಿದ ಆರೋಪದ ಮೇಲೆ ಈ ವಾರ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಆರೋಪ ಸಾಬೀತಾದರೆ, 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಸೋಮವಾರ ಬಿಡುಗಡೆಯಾದ ಕ್ರಿಮಿನಲ್ ದೂರಿನಲ್ಲಿ ಘಟನೆ ಮತ್ತು ವಿಕ್ಟೋರಿಯಾ ಡೊಮಿಂಗ್ಯೂಜ್ ಅವರ ಜೀವನದ ಬಗ್ಗೆ ಹೊಸ ವಿವರಗಳನ್ನು ನೀಡಲಾಗಿದೆ.

ಆಗಿದ್ದೇನು?: 33 ವರ್ಷದ ವ್ಯಕ್ತಿ ಮೆಕ್ಸಿಕೊದ ಕ್ಯಾಬೊ ಸ್ಯಾನ್ ಲ್ಯೂಕಾಸ್‌ನಿಂದ ಮಂಗಳವಾರ ಲಾಸ್ ಏಂಜಲೀಸ್‌ಗೆ ಬಂದರು. ಅವರು ಸಾಲ್ಟ್ ಲೇಕ್ ಸಿಟಿಗೆ ಹೋಗಬೇಕಾಗಿತ್ತು, ಆದರೆ, ಅವರಿಗೆ ಸಂಪರ್ಕಿಸುವ ವಿಮಾನ ಇರಲಿಲ್ಲ. ಬಳಿಕ, ಅವರು ಮಿತಿ ಇಲ್ಲದೆ ಬಿಯರ್‌ಗಳನ್ನು ಕುಡಿದು, ಡ್ರಗ್ಸ್ ಮಿಶ್ರಿತ ಧೂಮಪಾನ ಮಾಡುತ್ತಾ ಲಾಸ್ ಏಂಜಲೀಸ್‌ನ ಡೌನ್‌ಟೌನ್‌ನ ಹೋಟೆಲ್‌ನಲ್ಲಿ ರಾತ್ರಿ ಕಳೆದರು ಎಂದು ದೂರುದಾರರು ಎಫ್‌ಬಿಐಗೆ ತಿಳಿಸಿದರು.

ಮರುದಿನವೂ, ಅವರು ಡ್ರಗ್ಸ್ ವ್ಯಸನ ಮುಂದುವರೆಸಿದ್ದರು. ಬಸ್‌ನಲ್ಲಿ ಉತಾಹ್‌ಗೆ ತೆರಳುವ ಬದಲು ವಿಮಾನದಲ್ಲಿ ಹೋಗಲು ನಿರ್ಧರಿಸಿದರು. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಹೆಚ್ಚಿನ ಡ್ರಗ್ಸ್ ಇರುವ ಸಿಗರೇಟ್ ಸೇದಿದ್ದರು. ಅದೇ ನಶೆಯಲ್ಲಿ ವಿಮಾನ ಮಿಸ್ ಮಾಡಿಕೊಂಡು ರಾತ್ರಿ ಓಡಾಡುತ್ತ ರಸ್ತೆಯಲ್ಲೇ ಕಳೆದಿದ್ದಾರೆ.

ಶುಕ್ರವಾರ, ಎರಡನೇ ವಿಮಾನ ಮಿಸ್ ಮಾಡಿಕೊಂಡ ಅವರು, ಬೇರೊಂದು ವಿಮಾನದ ಟಿಕೆಟ್ ಬುಕ್ ಮಾಡಿ ಸೀಟಲ್ಲಿ ಕುಳಿತರು. ಈ ಸಂದರ್ಭ ಪಕ್ಕದಲ್ಲಿದ್ದ ಇತರೆ ಪ್ರಯಾಣಿಕರು ತಪ್ಪು ವಿಮಾನ ಹತ್ತಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ಅವರು, ವಿಮಾನದಿಂದ ಇಳಿಯಲು ಮನವಿ ಮಾಡಿದ್ದಾರೆ. ಅಸ್ವಸ್ಥನಾಗಿರುವೆ ಎಂದು ಕಾರಣ ಕೊಟ್ಟಿದ್ದಾರೆ. ಆದರೆ, ಇನ್ನೇನು ವಿಮಾನ ಟೇಕಾಫ್ ಆಗಬೇಕಿದ್ದರಿಂದ ಸಿಬ್ಬಂದಿ ಇಳಿಯಲು ಅವಕಾಶ ಕೊಡಲಿಲ್ಲ.

ಬಳಿಕ, ಕಾಕ್ ಪಿಟ್ ತೆರೆಯಲು ಯತ್ನಿಸಿದ ಆತನಿಗೆ ಪೈಲಟ್ ತಡೆಯೊಡ್ಡಿದ್ದಾರೆ. ಗಾಬರಿಗೊಂಡ ಆತ ತುರ್ತು ನಿರ್ಗಮನದ ಬಾಗಿಲು ತೆರೆದು ಜಿಗಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!