ಉಡುಪಿ: ನವವಿವಾಹಿತೆಗೆ ವರದಕ್ಷಿಣೆ ಕಿರುಕುಳ ,ಜೀವ ಬೆದರಿಕೆ- ದೂರು ದಾಖಲು
ಉಡುಪಿ ಜೂ.29(ಉಡುಪಿ ಟೈಮ್ಸ್ ವರದಿ): ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಾಣಿಶ್ರೀ (31) ಎಂಬವರು ದೂರು ನೀಡಿದ್ದು, ಅದರಂತೆ ವಾಣಿಶ್ರೀ ಅವರು 2020 ರ ಅ.19 ರಂದು ಸುಜಿತ್ ಎಂಬಾತ ನೊಂದಿಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ವಿವಾಹದ ಮೊದಲ ದಿನದಿಂದಲೇ ಸುಜಿತ್, ವಾಣಿಶ್ರೀ ಅವರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ.
ಅಲ್ಲದೆ ಸುಪ್ರೀತ, ಸುಜಾತ, ವಿಟ್ಟಲ್ ಪುತ್ರನ್ ಇವರ ಕುಮ್ಮಕ್ಕಿನಲ್ಲಿ ಸುಜಿತ್ ವಾಣಿಶ್ರೀ ಅವರಿಗೆ ಬೈಯ್ದು 5 ಲಕ್ಷ ಹಣವನ್ನು ತವರು ಮನೆಯಿಂದ ತರಬೇಕು ಎಂದು ಹೇಳಿದ್ದ ಹಾಗೂ ವಾಣಿಶ್ರೀ ಅವರ ಬಳಿ ಇದ್ದ 45 ಪವನ್ ಚಿನ್ನವನ್ನು ತನ್ನ ಹೆಸರಿನಲ್ಲಿ ಜಾಯಿಂಟ್ ಎಕೌಂಟ್ ನಲ್ಲಿ ಇಡಬೇಕು ಹಾಗೂ ತನಗೆ ವಿದೇಶಕ್ಕೆ ಹೋಗಲು ಹಣದ ಅವಶ್ಯಕತೆಯಿದ್ದು, ತವರು ಮನೆಯಿಂದ ಹಣವನ್ನು ತರಬೇಕೆಂದು ಒತ್ತಾಯಿಸಿದ್ದ. ಇದಕ್ಕಾಗಿ 2020 ರ ಡಿ.7 ರಂದು 35,000 ರೂ. ವನ್ನು ಸುಜಿತ್ ಖಾತೆಗೆ ವರ್ಗಾಯಿ ಸಲಾಗಿತ್ತು. ಆದರೆ ಹೆಚ್ಚಿನ ಹಣ ತರುವಂತೆ ಅಶ್ಲೀಲವಾಗಿ ಬೈಯ್ದು ಹೆದರಿಸುತ್ತಿದ್ದ ಎಂದು ದೂರಲಾಗಿದೆ. ಅಲ್ಲದೆ 2021 ರ ಜ.28 ರಂದು ಹಣ ಮತ್ತು ಚಿನ್ನ ತರದಿದ್ದರೆ ಮನೆಯಲ್ಲಿ ಇರಬಾರದು, ಇದ್ದರೇ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಹಣ ಹಾಗೂ ಒಡವೆಯನ್ನು ಮನೆಯಿಂದ ತೆಗೆದುಕೊಂಡು ಬರಲೇಬೇಕು ಎಂದು ಮನೆಯಿಂದ ಹೊರಹಾಕಿರುವುದಾಗಿ ವಾಣಿಶ್ರೀ ಅವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.