ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್!
ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಪೋಷಕರಲ್ಲಿ ಆತಂಕ ಮನೆಮಾಡಿದೆ. ಸೋಮವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ತಲೆನೋವು ಸೇರಿದಂತೆ ಅನಾರೋಗ್ಯವಿರುವ ಬಗ್ಗೆ ಕೆಲವು ಗಂಟೆಗಳ ಬಳಿಕ ಆಕೆ ಹೇಳಿದ್ದು ಬಳಿಕ ಆಕೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳೀರಿಸಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು, ನಂತರ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದು ಅದರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರದ ಹಿನ್ನೆಲೆ ಆಕೆಗೆ ಪರೀಕ್ಷೆ ಬರೆಯಲು ಅನುವು ಮಾಡಲಾಗಿತ್ತು. ಆದರೆ ಸೋಮವಾರ ಸಂಜೆ ಆಕೆಗೆ ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಮಂಗಳವಾರ ಗಂಟಲು ದ್ರವ ಪರೀಕ್ಷಾ ವರದಿ ಕೈಸೇರಿದ್ದು ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ಮುಗಿಸಿದವರು ವಿದ್ಯಾರ್ಥಿನಿ ಮನೆಗೆ ಬಂದಿದ್ದರೆನ್ನಲಾಗುತ್ತಿದ್ದು, ವಿದ್ಯಾರ್ಥಿನಿಗೆ ಹೇಗೆ ಕೊರೋನಾ ಸೋಂಕು ತಗಲಿದೆ ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ. ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿ ಸೀಲ್ ಡೌನ್ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |