| ಹುಬ್ಬಳ್ಳಿ: ಕರ್ನಾಟಕದಲ್ಲಿ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಡೋಸ್‌ಗಳಷ್ಟು ಕೋವಿಡ್ ಲಸಿಕೆ ಪೋಲಾಗಿದೆ. ಲಸಿಕೆ ಪೋಲಾಗಿರುವ ಜಿಲ್ಲೆಗಳಲ್ಲಿ ಬಾಗಲಕೋಟೆ ಮೊದಲ ಹಾಗೂ ಹಾಸನ ಎರಡನೇ ಸ್ಥಾನದಲ್ಲಿವೆ.
ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಗೊಂಡ ಜನವರಿ 16ರಿಂದ ಜೂನ್ 25ವರೆಗೆ ಬಾಗಲಕೋಟೆಯಲ್ಲಿ 22,196 (ಶೇ 12.66) ಪೋಲಾಗಿದ್ದರೆ, ಹಾಸನದಲ್ಲಿ 17,028 (ಶೇ 8.01) ವ್ಯರ್ಥ ಆಗಿವೆ. ದಾಖಲೆಗಳ ಪ್ರಕಾರ, ರಾಜ್ಯದ 20 ಜಿಲ್ಲೆಗಳಲ್ಲಿ ಸರಾಸರಿ ಶೇ 2.29ರಷ್ಟು ವ್ಯರ್ಥವಾಗಿದ್ದರೆ, ಉಳಿದ ಹತ್ತು ಜಿಲ್ಲೆಗಳ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಿಗದಿತ ಗುರಿಗಿಂತ ಹೆಚ್ಚಿನ ಲಸಿಕೆಗಳನ್ನು ಹಾಕಿರುವ ಶಿವಮೊಗ್ಗದಲ್ಲಿ ಶೇ –6, ಉಡುಪಿ ಶೇ –5.57, ದಕ್ಷಿಣ ಕನ್ನಡ ಶೇ –4.71, ಧಾರವಾಡ ಶೇ 4.25, ಹಾವೇರಿ ಶೇ 4.16, ಉತ್ತರಕನ್ನಡ ಶೇ –3.65, ಚಿಕ್ಕಮಗಳೂರು ಶೇ –2.25, ಬೆಳಗಾವಿ ಶೇ –1.72, ಕೊಡಗು ಶೇ –1.36, ಬೆಂಗಳೂರು (ಬಿಬಿಎಂಪಿ) ಶೇ –1.29 ಹಾಗೂ ಮೈಸೂರಿನಲ್ಲಿ ಶೇ –0.13 ಇದೆ.
11 ಎಂಎಲ್ ಲಸಿಕೆಗಳನ್ನು ಒಳಗೊಂಡ ಪ್ರತಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ವಯಲ್ಸ್ ಅನ್ನು, ಗರಿಷ್ಠ 4 ತಾಸು ತೆರೆದಿಡಬಹುದಾಗಿದೆ. ಅಷ್ಟರಲ್ಲಿ ಬಳಸದಿದ್ದರೆ ವ್ಯರ್ಥವಾಗುತ್ತವೆ. ಒಂದು ವಯಲ್ಸ್ ತೆರೆದರೆ ಕನಿಷ್ಠ 10 ಮಂದಿಗೆ ನೀಡಬೇಕು. ಆದರೆ, ಆರಂಭಿಕ ಹಂತದಲ್ಲಿ 10ಕ್ಕಿಂತಲೂ ಕಡಿಮೆ ಮಂದಿಗೆ ನೀಡಲಾಗಿದೆ. ಇದರಿಂದಾಗಿ, ಹೆಚ್ಚಿನ ಲಸಿಕೆಗಳು ಪೋಲಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಲಸಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು, ಹೆಚ್ಚುವರಿ ಲಸಿಕೆಗಳನ್ನು ಬಳಸಿರುವುದನ್ನು ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ | |