ಉಡುಪಿ: ನಗರದಲ್ಲಿ ನರ್ಮ್ ಬಸ್ ಓಡಾಟ ಪ್ರಾರಂಭ

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಮತ್ತು ಹೊರವಲಯದ ಜನತೆಯ ಬಹುಬೇಡಿಕೆ ಇದ್ದ ನರ್ಮ್ ಬಸ್ ಇಂದು ಓಡಾಡಲು ಪ್ರಾರಂಭಿಸಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಅನ್ ಲಾಕ್ ಪ್ರಾರಂಭವಾಗಿದ್ದು, ಶೇ.50 ರಷ್ಟು ಪ್ರಯಾಣಿಕರನ್ನು ತುಂಬಿಸಿ ಬಸ್ ಓಡಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ ಖಾಸಗಿ ಬಸ್ ಮಾಲಕರು ಟಿಕೆಟ್ ದರ ಏರಿಸಲು ಅನುಮತಿ ಸಿಗದೆ ಬಸ್ ಓಡಾಟ ನಡೆಸಲ್ಲ ಎಂಬ ಬೇಡಿಕೆ ಜಿಲ್ಲಾಡಳಿತದ ಮುಂದೆ ಇಟ್ಟಿತ್ತು.

ಜಿಲ್ಲೆಯ ಹೆಚ್ಚಿನ ಜನರು ಖಾಸಗಿ ಬಸ್‌ನ್ನೇ ಅವಲಂಬಿಸಿಕೊಂಡಿರುವುದರಿಂದ ಕಳೆದ ಶುಕ್ರವಾರ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜುಲೈ 1 ರಿಂದ ಶೇ. 25 ರಷ್ಟು ಬಸ್ ಟಿಕೆಟ್ ದರ ಹೆಚ್ಚಳದೊಂದಿಗೆ ಓಡಾಟ ಪ್ರಾರಂಭಿ ಸುವುದ್ದಕ್ಕೆ ಬಸ್ ಮಾಲಕರು ಒಪ್ಪಿದ್ದರು.

ಬಸ್ ದರ ಶೇ.25 ಏರಿಕೆಗೆ ಸಾರ್ವಜನಿಕರ ವಿರೋಧ: ಕಳೆದ ಕೋವಿಡ್ ಮೊದಲ ಅಲೆಯ ನಂತರ ನವಂಬರ್ ನಲ್ಲಿ ಬಸ್ ದರ ಏರಿಸಿದ್ದ ಜಿಲ್ಲಾಡಳಿತ ಈಗ ಮತ್ತೆ ಏಕಾಏಕಿ ಶೇ, 25 ರಷ್ಟು ಏರಿಸಿರುವುದು ಕಾನೂನಿನ ವಿರುದ್ಧದ ನಿರ್ಧಾರ, ಒಮ್ಮೆ ಬಸ್ ಟಿಕೆಟ್ ದರ ಏರಿಸಿದರೆ ಮತ್ತೆ ನಾಲ್ಕು ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಬೇಕೆಂಬ ಸ್ಪಷ್ಟ ಕಾನೂನಿದೆ. ಆದರೇ ಇದೆಲ್ಲವನ್ನು ಉಲ್ಲಂಘಿಸಿ ಬಸ್ ದರ ಏರಿಕೆ ಮಾಡಲಾಗಿದೆಂಬುದು ಸಾರ್ವಜನಿಕರ ಅಭಿಪ್ರಾಯ.

ಬಸ್ ಮಾಲಕರು ನಮಗೆ ಶೇ.50 ಪ್ರಯಾಣಿಕರನ್ನು ತುಂಬಿಸಿ ಬಸ್ ಸಂಚಾರ ಮಾಡಲು ಕಷ್ಟ ಸಾಧ್ಯ, ಅಷ್ಟು ಮಾತ್ರವಲ್ಲದೆ ಡೀಸೆಲ್ ದರವೂ 94 ರ ಗಡಿ ದಾಟಿದ್ದು ಇಷ್ಟು ದರದ ಡೀಸೆಲ್ ಹಾಕಿ ಬಸ್ ಸಂಚಾರ ಪುನ: ಪಾರಂಭಿಸುವುದು ಅಗುವುದೇ ಇಲ್ಲ ಎಂಬ ವಾದ. ಅದಕ್ಕಾಗಿ ಮೀನುಗಾರಿಗೆ ನೀಡುಂತಹ ಸಬ್ಬಿಸಿಡಿ ಡೀಸೆಲ್ ನಮಗೂ ನೀಡಿ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ನರ್ಮ್ ಬಸ್ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲಿ: ನಗರದಲ್ಲಿ 26 ನರ್ಮ್ ಬಸ್ ಇದ್ದು ಗ್ರಾಮೀಣ ಭಾಗವಾದ ಹೂಡೆ, ಬೇಂಗ್ರೆ, ಪಡುಕೆರೆ, ಕರ್ವಾಲು, ಮರ್ಣೆ, ಕೊಕ್ಕರ್ಣೆ, ಹೆರ್ಗ, ಪಿತ್ರೋಡಿ, ಮಣಿಪುರ ಭಾಗಗಲ್ಲಿ ಖಾಸಗಿ ಬಸ್ ಸಂಚಾರ ಬಹಳ ಕಡಿಮೆ ಇದ್ದು ಈ ಭಾಗದ ಜನರ ಸಂಚಾರಕ್ಕೆ ನರ್ಮ್ ಬಹಳ ಅಗತ್ಯವಾಗಿದ್ದು ಕೂಡಲೇ ಡಿಪೋದಲ್ಲಿದ್ದ ಬಸ್ ಗಳನ್ನು ಸಂಚಾರ ಪ್ರಾರಂಭಿಸಬೇಕೆನ್ನುವುದು ಜನರ ಒತ್ತಾಯವಾಗಿದೆ.

ಇಂದು ಸಂಚಾರಕ್ಕೆ ಇಳಿದ ನಾಲ್ಕು ಬಸ್ ಕೇವಲ ಜನೆ ತೋರ್ಪಡಿಕೆ ಆಗದೆ, ಡಿಪೋದಲ್ಲಿ ತುಕ್ಕು ಹಿಡಿಯುತ್ತಿರುವ ಎಲ್ಲಾ ಬಸ್‌ ಗಳನ್ನು ಸುಸ್ಥಿತಿಗೆ ತಂದು ಕಡಿಮೆ ದರದಲ್ಲಿ ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವುದು ಜನತೆಯ ಆಶಯ.

Leave a Reply

Your email address will not be published. Required fields are marked *

error: Content is protected !!