ಯುಎಇ: ಜುಲೈ 21ರವರೆಗೆ ಭಾರತಕ್ಕೆ ವಿಮಾನ ಹಾರಾಟ ನಿಷೇಧ ಮುಂದುವರಿಕೆ
ಅಬುದಾಭಿ,ಜೂ.27: ಜಗತ್ತಿನಾದ್ಯಂತ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ 14 ದೇಶಗಳಿಗೆ ವಿಮಾನ ಹಾರಾಟಕ್ಕೆ ವಿಧಿಸಲಾಗಿರುವ ನಿಷೇಧವು ಜುಲೈ 21ರವರೆಗೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಯುಎಇನ ಸಾಮಾನ್ಯ ನಾಗರಿಕ ವಿಮಾನ ಪ್ರಾಧಿಕಾರ ಮಾಹಿತಿ ನೀಡಿದ್ದು, ಭಾರತ, ಲೈಬೀರಿಯ, ನಮೀಬಿಯ, ಸಿಯೆರಾ ಲಿಯೋನ್, ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಉಗಾಂಡ, ಜಾಂಬಿಯಾ, ವಿಯೆಟ್ನಾಂ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ನೈಜೀರಿಯ ಹಾಗೂ ದಕ್ಷಿಣ ಆಫ್ರಿಕ ದೇಶಗಳಿಗೆ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆಯೆಂದು ತಿಳಿಸಿದೆ. ಆದರೆ ಈ ಅವಧಿಯಲ್ಲಿ ಸರಕು ಸಾಗಣೆ ವಿಮಾನಗಳು, ಔದ್ಯಮಿಕ ಹಾಗೂ ವಿಶೇಷ ವಿಮಾನಗಳ ಹಾರಾಟಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದೂ ತಿಳಿಸಿದೆ.
ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ ಯುಎಇನ ವಿಮಾನಯಾನ ಪ್ರಾಧಿಕಾರ ಹಾಗೂ ಎನ್ಸಿಇಎಂಎ ಸಂಸ್ಥೆಗಳು ಭಾರತದಿಂದ ಆಗಮಿಸುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಎ. 24ರಿಂದ ನಿಷೇಧ ವಿಧಿಸಿತ್ತು. ಅದಾದ ಬಳಿಕ ಯುಎಇ ಅನುಮೋದಿತ ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರುವ ಹಾಗೂ ಅಧಿಕೃತ ರೆಸಿಡೆನ್ಸ್ ವೀಸಾವನ್ನು ಹೊಂದಿರುವ ಭಾರತೀಯ ಪ್ರಯಾಣಿಕರಿಯುಎಇಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದೆಂದು ದುಬೈನ ಬಿಕ್ಕಟ್ಟು ಹಾಗೂ ವಿಕೋಪ ನಿರ್ವಹಣೆಗಾಗಿನ ಉನ್ನತ ಸಮಿತಿಯು ಘೋಷಣೆ ಮಾಡಿತ್ತು.
ಈ ಹಿನ್ನಲೆಯಲ್ಲಿ ಜೂ. 23ರಿಂದ ಭಾರತಕ್ಕೆ ವಿಮಾನಯಾನ ಪುನರಾರಂಭಗೊಳ್ಳುವುದೆಂದು ನಿರೀಕ್ಷಿಸಲಾಗಿತ್ತು. ಅಲ್ಲದೆ ಏರ್ಲೈನ್ ಸಂಸ್ಥೆಗಳು ಜು.6ರಿಂದ ಬುಕಿಂಗ್ಗಳನ್ನು ಕೂಡಾ ತೆರೆದಿದ್ದವು. ಆದರೆ ಈ ನಡುವೆ ಕೋವಿಡ್ ಪ್ರಕರಣದ ಪರಿಣಾಮದ ಜೊತೆಗೆ ಭಾರತದಿಂದ ಯುಎಇಗೆ ಆಗಮಿಸುವ ಪ್ರಯಾಣಿಕರು ತಮ್ಮ ನಿರ್ಗಮನಕ್ಕೆ 4 ತಾಸುಗಳ ಮೊದಲು ವಿಮಾನ ನಿಲ್ದಾಣಗಳಲ್ಲಿ ರ್ಯಾಪಿಡ್ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂದು ನೂತನ ಮಾರ್ಗದರ್ಶಿ ತಿಳಿಸಿದ್ದು, ಆದರೆ ಭಾರತದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ರ್ಯಾಪಿಡ್ ಪಿಸಿಆರ್ ಪರೀಕ್ಷಾ ಸೌಕರ್ಯಗಳ ಕೊರತೆಯಿರುವುದರಿಂದಲೂ ಯುಎಇ ವಿಮಾನ ಹಾರಾಟದ ರದ್ದತಿಯನ್ನು ಜುಲೈ 21ರವರೆಗೆ ಮುಂದೂಡಲಾಗಿದೆ ಎಂದೂ ಹೇಳಲಾಗುತ್ತಿದೆ.